ಬೆಂಗಳೂರು: ರೂಪಾಂತರಗೊಂಡಿರುವ ಕೋವಿಡ್ ಸೋಂಕು ತಂದಿಟ್ಟ ಕರಾಳ ಪರಿಸ್ಥಿತಿಯಿಂದಾಗಿ ಜನಸಾಮಾನ್ಯರಿಗೆ ಜೀವನ ನಿರ್ವಹಣೆಯೇ ಬಹಳ ಕಷ್ಟಕರವಾಗಿದೆ. ಒಂದೆಡೆ ರೋಗದ ವಿರುದ್ಧ ಹೋರಾಡಬೇಕು, ಜತೆಗೆ ರೋಗ ಬಾರದಂತೆ ರೋಗ ನಿರೋಧಕ ಶಕ್ತಿಯನ್ನೂ ಪಡೆಯಬೇಕು. ಆದರೆ ಈ ಎರಡೂ ಕೆಲಸವನ್ನು ಸರಿಯಾಗಿ ಮಾಡಲಾಗದ ವಾತಾವರಣ ಸೃಷ್ಟಿಯಾಗಿದೆ.
ಸೋಂಕು ನಿಯಂತ್ರಿಸಲು ಇದೀಗ ಸರ್ಕಾರ ಲಾಕ್ಡೌನ್ ವಿಸ್ತರಿಸಿದ್ದು, ಸಂಕಷ್ಟದಲ್ಲಿರುವವರಿಗೆ 1,250 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಆದ್ರೆ ಇದು ಯಾವುದಕ್ಕೂ ಸಾಲೋಲ್ಲ ಎನ್ನುವ ಬೇಸರ ಮಧ್ಯಮ ವರ್ಗದ ಜನರದ್ದು.
ಲಾಕ್ಡೌನ್ ಕಾರಣ ಕೈಯಲ್ಲಿ ಕೆಲಸವಿಲ್ಲ. ಆದಾಯ ತಂದು ಕೊಡುವ ದಾರಿಗಳು ಮುಚ್ಚಿವೆ. ದುಬಾರಿ ದುನಿಯಾದಲ್ಲಿ ಕೂಡಿಟ್ಟಿದ್ದ ಹಣವೆಲ್ಲ ಕರಗಿ ಹೋಗ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಹೋದರೂ ಜೇಬಿಗೆ ಕತ್ತರಿ ಪಕ್ಕಾ. ಹೀಗೆ ನಾನಾ ರೀತಿಯಲ್ಲಿ ಬಡವರು, ಮಧ್ಯಮ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇದ್ರ ನಡುವೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಟಿಕಾಹಾರ ಸೇವಿಸುವುದು ದೂರದ ಮಾತೇ ಸರಿ. ಕೋವಿಡ್ ಎದುರಿಸಲು ಬೇಕಾದ ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಯನ್ನು ನಿತ್ಯ ಖರೀದಿಸುವುದು ಕೂಡ ಒಮ್ಮೊಮ್ಮೆ ಕಷ್ಟವೇ ಆಗುತ್ತಿದೆ ಅನ್ನೋದು ಸಾಮಾನ್ಯ ಜನರ ಸಂಕಟ.
ಸರ್ಕಾರವೇನೋ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ಹಾಗೂ ಎಪಿಎಲ್ ದಾರರಿಗೆ 10 ಕೆ.ಜಿ ಅಕ್ಕಿ (15 ರೂ. ಒಂದು ಕೆ.ಜಿಯಂತೆ) ನೀಡುತ್ತಿದೆ. ಆದರೆ ಇತರೆ ವಸ್ತುಗಳ ಖರೀದಿಗೆ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು ಜನತೆಯ ಬವಣೆ
ಈ ಬಗ್ಗೆ ಮಾತನಾಡಿರುವ ಬೆಂಗಳೂರಿನ ನಿವಾಸಿ ಚಂದ್ರಶೇಖರ್, ಬಡವರಿಗೆ, ಮಧ್ಯಮ, ಕೆಳ ವರ್ಗದ ಜನರಿಗೆ ಕೊರೊನಾ ಎಂಬುದು ಶಾಪವಾಗಿದೆ. ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಜಾರಿ ಮಾಡಿರುವ ಸರ್ಕಾರ ಮನೆಯಿಂದ ಹೊರಗೆ ಬರಬೇಡಿ ಅಂತಿದೆ. ಪರಿಣಾಮ ನಮ್ಮ ನಿತ್ಯದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಪ್ರತಿದಿನ ಬಳಕೆ ಮಾಡುವ ವಸ್ತುಗಳನ್ನು ಖರೀದಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.