ಬೆಂಗಳೂರು : ನಗರದಲ್ಲಿ ಬಹುಶಃ ಕೋವಿಡ್ ಸೋಂಕು 2 ವಾರಗಳಲ್ಲಿ ಹತೋಟಿಗೆ ಬರಲಿದೆ. ಗ್ರಾಮೀಣ ಪ್ರದೇಶದಲ್ಲಿ ಏರಿಕೆಯಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ವಿಸ್ತ್ರತವಾಗಿ ಸಮಾಲೋಚನೆ ಮಾಡಿದ್ದೇನೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಏರಿಕೆಯಾಗಲಿದೆ : ಸಚಿವ ಡಾ. ಸುಧಾಕರ್ ಜಿಲ್ಲಾ ರೌಂಡ್ಸ್ಗೂ ಮುನ್ನ ಮಾತನಾಡಿದ ಸಚಿವ ಸುಧಾಕರ್, ಯಾವುದೇ ಸೋಂಕು ಮೊದಲು ನಗರ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇದು ಸಾಮಾನ್ಯ ವಿದ್ಯಮಾನ.
ಪ್ರಾರಂಭದಲ್ಲಿ ಸಾಂಕ್ರಾಮಿಕ ರೋಗಗಳು ಕ್ಯಾಪಿಟಲ್ ಸಿಟಿಗಳಲ್ಲಿ ಕಂಡು ಬರುತ್ತವೆ. ಹೆಚ್ಚು ಜನಸಂದಣಿ ನಗರ ಪ್ರದೇಶದಲ್ಲಿರುವುದರಿಂದ ಸೋಂಕು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ ಎಂದರು.
ಮಹಾರಾಷ್ಟ್ರದ ಮುಂಬೈನಲ್ಲಿ ಹೆಚ್ಚು ಸೋಂಕು ಕಾಣಿಸಿತ್ತು. ಈಗ ಅಲ್ಲಿ ಕಡಿಮೆ ಪ್ರಕರಣ ದಾಖಲಾಗುತ್ತಿವೆ. ಆದರೆ, ರಾಜ್ಯದ ಜಿಲ್ಲೆಗಳಲ್ಲಿ 20 ರಿಂದ 25 ಪರ್ಸೆಂಟ್ ಜನರಿಗೆ ಸೋಂಕು ಹರಡುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗದಂತೆ ಸಿದ್ದತೆ ಮಾಡಿಕೊಳ್ಳಿ ಎಂದು ತಿಳಿಸಿದ್ದೇನೆ. ದೊಡ್ಡ ನಗರಗಳಲ್ಲಿ ಇಷ್ಟು ಆರೋಗ್ಯ ವ್ಯವಸ್ಥೆ ಇದ್ದರೂ ಐಸಿಯು, ವೆಂಟಿಲೇಟರ್ ಕೊರತೆ ಉಂಟಾಗಿದೆ.
ಹಾಗಾಗಿ, ಗ್ರಾಮೀಣ ಭಾಗದಲ್ಲಿ ಸರಿಯಾದ ಚಿಕಿತ್ಸೆ ದೊರೆಯಲು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇಂದಿನಿಂದಲೇ ಕೋವಿಡ್ ಕೇರ್ ಸೆಂಟರ್ ಹಾಗೂ ಸ್ಟೆಪ್ ಡೌನ್ ಹಾಸ್ಪಿಟಲ್ ಸೇರಿದಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.
ವ್ಯಾಕ್ಸಿನ್ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿ ಸ್ಟಾಕ್ ಬರುತ್ತಿದ್ದ ಹಾಗೇ ನಾವು ಕೊಡುತ್ತೇವೆ. ಎಲ್ಲರಿಗೂ ಲಸಿಕೆ ಕೊಡಬೇಕು ಎಂಬುದೇ ನಮ್ಮ ಉದ್ದೇಶ. ನಾವು ಎಲ್ಲಾ ದೇಶಗಳಿಂದ, ಕೇಂದ್ರ ಸರ್ಕಾರದಿಂದ ಎಷ್ಟು ಲಸಿಕೆ ತೆಗೆಕೊಳ್ಳಲು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತಿದ್ದೇವೆ.
ಕೇಂದ್ರ ಸರ್ಕಾರದ ಸಹಾಯದಿಂದ ವಿದೇಶಗಳಿಂದ ಇನ್ನೂ ಹೆಚ್ಚು ತರಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡಬೇಕು ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದರು. ಇಂದು ದಾಯಿಯರ ದಿನಾಚರಣೆ ಅಂಗವಾಗಿ ಸಚಿವ ಸುಧಾಕರ್ ಶುಭ ಕೋರಿದರು.
ಕೆ.ಆರ್ ಪುರಂ ಆರೋಗ್ಯ ಕೇಂದ್ರಗಳ ತಪಾಸಣೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಆಸ್ಪತ್ರೆಗಳ ಭೇಟಿ ಹಾಗೂ ಸ್ವಕ್ಷೇತ ಚಿಕ್ಕಬಳ್ಳಾಪುರದಲ್ಲಿ ಕೋವಿಡ್ ಸಂಬಂಧಿತ ಸಭೆಗಳನ್ನು ನಡೆಸಲಿದ್ದಾರೆ.
ಓದಿ:'ಬ್ಲಾಕ್ ಫಂಗಸ್ ಬಗ್ಗೆ ತಜ್ಞರ ವರದಿ ಕೇಳಿದ್ದೇವೆ, ಉಚಿತ ಚಿಕಿತ್ಸೆ ಬಗ್ಗೆ ಶೀಘ್ರವೇ ನಿರ್ಧಾರ'