ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಎಫೆಕ್ಟ್​​​​: ಉತ್ತಮ ವ್ಯಾಪಾರವಾಗದೆ ಕಂಗಾಲಾದ ಬೀದಿಬದಿ ವ್ಯಾಪಾರಸ್ಥರು - bangalore latest news

ಎರಡನೇ ಅಲೆ ಕೋವಿಡ್​ ಮತ್ತು ಲಾಕ್​ಡೌನ್​ ಎಫೆಕ್ಟ್​ನಿಂದಾಗಿ ಬೀದಿಬದಿ ವ್ಯಾಪಾರಸ್ಥರು, ಸಣ್ಣ ಪುಟ್ಟ ವ್ಯಾಪಾರವನ್ನೇ ನಂಬಿ ಜೀವನ ನಡೆಸುತ್ತಿದ್ದವರೀಗ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

covid effects on street vendors and small business
ಉತ್ತಮ ವ್ಯಾಪಾರವಿಲ್ಲದೇ ಕಂಗಾಲಾದ ಬೀದಿ ಬದಿ ವ್ಯಾಪಾರಸ್ಥರು

By

Published : Jun 4, 2021, 9:51 AM IST

ಬೆಂಗಳೂರು:ಕೋವಿಡ್​​, ಲಾಕ್​ಡೌನ್​ ಹೊಡೆತಕ್ಕೆ ಪ್ರತೀ ಕ್ಷೇತ್ರವೂ ನಲುಗಿದೆ. ಬೀದಿ ಬದಿಯಲ್ಲಿ ಹಣ್ಣು, ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಮಾರುವ ವ್ಯಾಪಾರಿಗಳು, ಸಣ್ಣ ಪುಟ್ಟ ಅಂಗಡಿಗಳನ್ನಿಟ್ಟುಕೊಂಡವರೀಗ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಈಟಿವಿ ಭಾರತದ ಜೊತೆ ಮಾತನಾಡಿದ್ದು, ಕೋವಿಡ್​​ ಎರಡನೇ ಅಲೆಯಲ್ಲಿ ಬೀದಿಬದಿ ವ್ಯಾಪಾರಿಗಳು ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಮನೆ ಬಾಡಿಗೆ, ಕರೆಂಟ್ ಬಿಲ್​, ನೀರಿನ ಬಿಲ್​ ​ಕಟ್ಟಲಾಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಕೊಳ್ಳಲಾಗುತ್ತಿಲ್ಲ. ಸರ್ಕಾರದಿಂದ ಯಾವುದೇ ಒಂದು ವ್ಯವಸ್ಥಿತ ಸವಲತ್ತುಗಳು ದೊರಕಿಲ್ಲ. ಅದರಿಂದ ಕರ್ನಾಟಕ ರಾಜ್ಯಾದ್ಯಂತ ಸುಮಾರು ಐದು ಲಕ್ಷ ಬೀದಿಬದಿ ವ್ಯಾಪಾರಿಗಳು ಬೀದಿ ಪಾಲಾಗಿದ್ದು, ನನಗೆ ಬಹಳ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್​ ಎಫೆಕ್ಟ್​ - ವ್ಯಾಪಾರಸ್ಥರು ಏನಂತಾರೆ?

ಬೀದಿಬದಿ ಮತ್ತು ಸಣ್ಣ ವ್ಯಾಪಾರಸ್ಥರ ಅಳಲು:

ಸಣ್ಣ ಅಂಗಡಿ ವ್ಯಪಾರಸ್ಥರಾದ ಶಾರದಾ ಎನ್ನುವವರು ಮಾತನಾಡಿ, 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ ನಷ್ಟ ಆಗುತ್ತಿದೆ ಹೊರತು ಲಾಭ ಇಲ್ಲ ಎಂದರು. ಕೋವಿಡ್ ಮೊದಲನೇ ಅಲೆ ಬಂದಾಗ ಪೂರ್ತಿ ಲಾಕ್​ಡೌನ್ ಮಾಡಿದ್ದರು, ಆಗ ಪೂರ್ತಿ ನಷ್ಟ ಉಂಟಾಗಿತ್ತು. ಇದೀಗ ಅಷ್ಟೋ ಇಷ್ಟೋ ವ್ಯಾಪಾರ ಆಗುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದರು. ಇನ್ನು ತರಕಾರಿ ಬೆಲೆ ಕೂಡ ಜಾಸ್ತಿಯಾಗಿದೆ. ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ, ಇಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ ಎಂದರು.

ಆರೋಗ್ಯ ದೃಷ್ಟಿಯಿಂದ ಹೇಳುವುದಾದರೆ ಎರಡನ್ನೂ ಸಮ ರೀತಿಯಲ್ಲಿ ನೋಡುವುದು ಮುಖ್ಯವಾಗುತ್ತದೆ. ಆರೋಗ್ಯ ಇದ್ದರೆ ಮಾತ್ರ ನಾವು ಮುಂದೆ ಜೀವನ ಸಾಗಿಸಬಹುದು. ಆದರೆ ಪರಿಹಾರದ ರೀತಿಯಲ್ಲಿ ಸರ್ಕಾರ ಸಣ್ಣ ವ್ಯಪಾರಸ್ಥರಿಗೆ ಇನ್ನೂ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು. ಪ್ರತಿಯೊಂದರ ಬೆಲೆ ದುಪ್ಪಟ್ಟಾಗಿದ್ದು, ಜೀವನ ನಿರ್ವಹಣೆ ಬಹಳ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಹಣ್ಣಿನ ವ್ಯಾಪಾರಿ ಚಂದ್ರಶೇಖರ್ ಮಾತನಾಡಿ, 10 ವರ್ಷದಿಂದ ಹಣ್ಣಿನ ವ್ಯಾಪಾರ ಮಾಡುತ್ತಿದ್ದೇನೆ. ಲಾಕ್​ಡೌನ್​ನಿಂದ ಬಹಳ ತೊಂದರೆಯಾಗುತ್ತಿದೆ. ಬೆಳಗ್ಗೆ ಹೊತ್ತು ಹಣ್ಣು-ತರಕಾರಿ ಕೊಳ್ಳುವುದಕ್ಕೆ ಬರುವವರ ಸಂಖ್ಯೆ ಕೂಡ ತುಂಬಾ ಕಡಿಮೆ. ಹಣ್ಣುಗಳ ವ್ಯಾಪಾರ ಇಲ್ಲವೇ ಇಲ್ಲ. 8 ಗಂಟೆಯ ನಂತರ ಜನ ಬರಲು ಪ್ರಾರಂಭಿಸುತ್ತಾರೆ. ಸುಮಾರು 9 ಗಂಟೆಯ ಹೊತ್ತಿಗೆ ಪೊಲೀಸರು ಮನೆ ಸೇರುವಂತೆ ಒತ್ತಡ ಹೇರಲು ಪ್ರಾರಂಭಿಸುತ್ತಾರೆ. ಹೀಗಾಗಿ ಜನರು ಅಷ್ಟಾಗಿ ಹೊರಗೆ ಬರುವುದಿಲ್ಲ ಎಂದರು. ರೈತರ ಬಳಿ ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ ಇಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಎರಡು ಗಂಟೆ ಮಾತ್ರ ವ್ಯಾಪಾರ ನೆಡೆಯುತ್ತಿದೆ. 100 ಕೆಜಿ ಹಣ್ಣು ತಂದರೆ 50 ಕೆಜಿಯಷ್ಟು ಕೊಳೆಯುವುದು ಸಾಮಾನ್ಯವಾಗಿಬಿಟ್ಟಿದೆ. ಜತೆಗೆ ಗ್ರಾಹಕರು ಕಡಿಮೆ ಇರುವುದರಿಂದ ದರ ಜಾಸ್ತಿಯಾಗಿದೆ. ರೈತರಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರಿಗೂ ಸಹ ಸಂಕಷ್ಟ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಕೊಪ್ಪಳ: ಕೊರೊನಾ ಕಾಟದಿಂದ ನೆಲಕಚ್ಚಿದ ಕ್ಯಾಟರಿಂಗ್ ಉದ್ಯಮ

ಮಂಡಿಗೆ ಬರಬೇಕಾದರೆ ಆಟೋ ಬಾಡಿಗೆ ಕೊಡಬೇಕು. ನಮ್ಮ ಸ್ವಂತ ವಾಹನ ತೆಗೆದುಕೊಂಡು ಹೋದರೆ ಪೊಲೀಸರ ಕಾಟ. ಖಾಸಗಿ ವಾಹನ ಸಗಟು ಮಾರುಕಟ್ಟೆಯಲ್ಲಿ ಬಿಡುವುದಿಲ್ಲ. ಈಗ ಬಾಡಿಗೆ ವಾಹನ ಮಾಡಿಕೊಂಡೇ ಕೆಲ ಹಣ್ಣುಗಳನ್ನು ಕೊಳ್ಳಲು ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗಬೇಕು. ವಾಹನಕ್ಕೆ ಸುಮಾರು 2000 ರೂ. ನೀಡಬೇಕು. ನಗರದ ಒಳಗೆ ಬರುವ ವೇಳೆಗೆ ಬೆಲೆ ಜಾಸ್ತಿಯಾಗುತ್ತದೆ ಎಂದು ಮಾಹಿತಿ ನೀಡಿದರು. ಸಂಜೆ 4ರಿಂದ 10 ಗಂಟೆಯವರೆಗೆ ಅವಕಾಶ ನೀಡಿದರೆ ಸ್ವಲ್ಪ ವ್ಯಾಪಾರ ಜಾಸ್ತಿಯಾಗುತ್ತದೆ. ರೈತರಿಗೂ ತೊಂದರೆ ತಪ್ಪುತ್ತದೆ ಎಂದರು. ಇನ್ನು ಪರಿಹಾರ ಪ್ಯಾಕೇಜ್ ನಮಗೆಲ್ಲ ತಲುಪುವುದಿಲ್ಲ. ನೂರಾರು ಕಾಯ್ದೆ, ಕಾನೂನುಗಳಿವೆ. ಸಂಘಟನೆಯವರ ಬಳಿ ಓಡಾಡಬೇಕು. ಎಷ್ಟೇ ಹಣ ಕೊಟ್ಟರೂ ಬೇಕಾಗಿಲ್ಲ. ವ್ಯಾಪಾರಕ್ಕೆ ತೊಂದರೆಯಾಗದಿದ್ದರೆ ಸಾಕು, ಹೇಗೋ ಜೀವನ ಸಾಗಿಸುತ್ತೇವೆ ಎಂದರು.

ಸೊಪ್ಪು ವ್ಯಾಪಾರಿ ಜಯಮ್ಮ ಮಾತನಾಡಿ, 20 ವರ್ಷದಿಂದ ಸೊಪ್ಪಿನ ವ್ಯಾಪಾರ ನಡೆಸುತ್ತಿದ್ದು, ಲಾಕ್​ಡೌನ್ ಅದಾಗಿನಿಂದ ಬಹಳ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.

ABOUT THE AUTHOR

...view details