ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಲು ಪ್ರಮುಖವಾಗಿ ಮಾರುಕಟ್ಟೆಗಳನ್ನು ಬಂದ್ ಮಾಡುವ ನಿರ್ಧಾರ ಬಿಬಿಎಂಪಿ ಕೈಗೊಂಡಿತ್ತು. ಚಿಕ್ಕಪುಟ್ಟ ಮಾರುಕಟ್ಟೆ ಆವರಣದಲ್ಲಿ ಮಾರ್ಷಲ್ಗಳನ್ನು ನಿಯೋಜಿಸಿ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲನೆಯಾಗುವಂತೆ ನೋಡಿಕೊಳ್ಳಲಾಗ್ತಿತ್ತು.
ಇದೀಗ ನಗರದ ಬೃಹತ್ ಮಾರುಕಟ್ಟೆಗಳಾದ ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಗಳ ಆರಂಭಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಏಪ್ರಿಲ್ 23 ರಿಂದ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಕೆ.ಆರ್ ಮಾರುಕಟ್ಟೆಯಲ್ಲೂ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಿಲ್ಲ.
ಆರಂಭದಲ್ಲಿ ಕೋವಿಡ್ ಕರ್ಫ್ಯೂ, ನೈಟ್ ಕರ್ಫ್ಯೂ, ನಂತರ ಸೆಮಿ ಲಾಕ್ಡೌನ್ ದಿನಗಳಲ್ಲಿ ಮಾರುಕಟ್ಟೆಗಳು ಬಂದ್ ಆಗಿತ್ತು. ಜನಸಂದಣಿ ಆಗಿ ಕೋವಿಡ್ ಹರಡುವಿಕೆಯನ್ನು ತಪ್ಪಿಸುವ ಸಲುವಾಗಿ ಮಾರುಕಟ್ಟೆಗಳನ್ನು ವಿಕೇಂದ್ರಿಕರಣ ಮಾಡಲಾಗಿದೆ.
ಕಲಾಸಿಪಾಳ್ಯ ಮಾರುಕಟ್ಟೆಯು ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಆಗಿದೆ. ಕೆ.ಆರ್. ಮಾರುಕಟ್ಟೆ ವಿಕೇಂದ್ರಿಕರಣ ಆಗಿ ಅವೆನ್ಯೂ ರೋಡ್, ಚಿಕ್ಕಪೇಟೆ, ಕಲಾಸಿಪಾಳ್ಯ, ಫ್ಲೈಓವರ್ ಕಡೆಗಳಲ್ಲಿ 4 ಕಡೆಗೆ ವಿಕೇಂದ್ರಿಕರಣ ಆಗಿದೆ.
ನಾಲ್ಕು ಗುಂಪುಗಳಾಗಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಹಿನ್ನಲೆ ಮಾರುಕಟ್ಟೆಗಳ ಚಿತ್ರಣವೇ ಬದಲಾಗಿದ್ದು, ಬಂದ್ ವಾತಾವರಣ ಇದೆ. ಫ್ಲೈ ಓವರ್ ಅಡಿಯಲ್ಲಿ ತಳ್ಳುವ ಗಾಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಫುಟ್ಪಾತ್, ರಸ್ತೆಗಳಲ್ಲಿ ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿದೆ.
ಇನ್ನು ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಕೇವಲ 3 ಸಾವಿರ ರೂ. ಸಹಾಯ ಧನ ಘೋಷಿಸಿದೆ. ಕೆ.ಆರ್. ಮಾರುಕಟ್ಟೆ ಸಂಪೂರ್ಣ ಬಂದ್ ಆಗಿ ಒಂದೂವರೆ ತಿಂಗಳೇ ಕಳೆದಿವೆ. ಒಟ್ಟು 300 ಹೂವಿನ ಅಂಗಡಿಗಳಿದ್ದು, ವಿವಿಧ ವ್ಯಾಪಾರಗಳ 2,200 ಅಂಗಡಿಗಳಿವೆ. 1,200 ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಕೋವಿಡ್ನಿಂದಾಗಿ ಎಲ್ಲರೂ ನಷ್ಟಕ್ಕೆ ಸಿಲುಕುವಂತಾಗಿದೆ.