ಕರ್ನಾಟಕ

karnataka

ETV Bharat / state

ಕೊರೊನಾ ಕರಾಳತೆ.. ಸಾವಿನ ಮನೆಯಲ್ಲಿ ಯುವಕರು ತೋರಿದ ಮಾನವೀಯತೆ! - humanity story in Covid death plural

ಬದುಕಿಗೆ ಆಸರೆ ಆಗಬೇಕಿದ್ದ ಗಂಡ ಮನೆಯ ಒಂದು ಕೊಠಡಿಯಲ್ಲಿ ಇಹಲೋಕ ತ್ಯಜಿಸಿದ ಚಿರ ನಿದ್ರೆಗೆ ಜಾರಿ ಶವವಾಗಿ ಮಲಗಿದ್ದರೇ, ರಕ್ತ ಸಂಬಂಧಿಕರು ಎನಿಸಿಕೊಂಡವರು ಮನೆಯ ಹೊಸ್ತಲು ತುಳಿಯದೆ ಕಾರಲ್ಲೇ ಕುಳಿತುಬಿಟ್ಟಿದ್ದಾರೆ. ಪತಿಯ ಅಂತ್ಯಕ್ರಿಯೆ ಹೇಗೆಂದು ಹೆಣ ಬಾರದ ಚಿಂತೆಯ ನೋವು ಹೊತ್ತ ಪತ್ನಿ ಹಾಲ್​ನಲ್ಲಿ ಒಂಟಿಯಾಗಿದ್ದಾಳೆ..

suresh kumar
suresh kumar

By

Published : Apr 17, 2021, 4:18 PM IST

Updated : Apr 17, 2021, 5:50 PM IST

ಬೆಂಗಳೂರು :ಚೀನಾದ ಮಾರುಕಟ್ಟೆಯಲ್ಲಿ ಹುಟ್ಟಿದ ಕೋವಿಡ್​-19 ವೈರಸ್​ ಜಗತ್ತನ್ನು ಅನಿವಾರ್ಯವಾಗಿ ಆಪತ್ತಿಗೆ ನೂಕಿತು. ಲಾಕ್​ಡೌನ್​ನಂತಹ ಕಠಿಣ ಕಟ್ಟುಪಾಡಿಗೆ ಒಳಪಟ್ಟ ಮನುಷ್ಯ ಗೃಹ ಬಂಧನ ಜೀವನದಿಂದ ಸಹಜ ಜೀವನಕ್ಕಾಗಿ ತವಕಿಸಿದ.

ತಂತ್ರಜ್ಞಾನದ ಚಕ್ರವನ್ನು ಕಾಲಿಗೆ ಕಟ್ಟಿಕೊಂಡು ಸಮುದ್ರ ತಳದಿಂದ ಮಂಗಳನ ಅಂಗಳದತ್ತ ದಾಪುಗಾಲು ಹಾಕುತ್ತ ಮಿಂಚಿನ ವೇಗದಲ್ಲಿ ಓಡುತ್ತಿದ್ದವನನ್ನು ಕಣ್ಣಿಗೆ ಕಾಣದ ವೈರಾಣು ಒಂದು ಕ್ಷಣದಲ್ಲಿ ನಿಲ್ಲಿಸಿ ತನ್ನ ಅಂಕೆಗೆ ತೆಗೆದುಕೊಂಡಿತು.

ವಿಶ್ವವನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಎಂಬುದನ್ನು ಕೊರೊನಾ ಸಾಬೀತುಪಡಿಸಿ ಒಂದಿಷ್ಟು ಮಾನವೀಯ ಪಾಠಗಳನ್ನು ಸೋವಿನೊಂದಿಗೆ ಕಲಿಸಿತು. ರಾಜ್ಯದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರ ಮಾನವೀಯ ಕರೆಗೆ ಕಿವಿಗೊಟ್ಟ ಯುವಕರು ಕೊರೊನಾ ಭಯದ ನಡುವೆ ಸೋಂಕಿನಿಂದ ಮೃತಪಟ್ಟವನ ಅಂತ್ಯ ಕ್ರಿಯೆ ನೆರವೇರಿಸಿದ್ದಾರೆ.

ಕೋವಿಡ್ ಹಾಗೂ ಅದರ ಪ್ರೇರೇಪಿತ ಲಾಕ್​ಡೌನ್‌ನ ಹತ್ತಿರದಿಂದ ಕಂಡ ಸುರೇಶ್‌ಕುಮಾರ್ ಅವರು, ಸೋಂಕು ಎಷ್ಟೆಲ್ಲ ಅನಾಹುತ ಕಷ್ಟ-ಸಂಕಷ್ಟ ತಂದು ಕೊಟ್ಟಿತ್ತು. ಸಂಕಷ್ಟ ಕಾಲದಲ್ಲಿ ಯಾರು ನಮ್ಮವರು ಎಂಬುದನ್ನ ತೋರಿಸಿಕೊಟ್ಟಿತು. ಈಗಲೂ ಕೆಲವರಲ್ಲಿ ಮಾನವೀಯ ಮೌಲ್ಯ ಜೀವಂತವಾಗಿ ಉಳಿದಿದೆ ಎಂಬುದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದು ಯುವಕರ ಅತಃಕರಣದ ಸೇವೆ ಬಣ್ಣಿಸಿದ್ದಾರೆ.

ಸುರೇಶ್ ಕುಮಾರ್ ಟ್ವೀಟ್

ಕೊರೊನಾ ಸೋಂಕಿನ ಹೆಸರು ಕೇಳಿದಾಕ್ಷಣ ದೂರ ಓಡುವ ಭಯಭೀತ ಸಂಬಂಧಿಗಳ ನಡುವೆ, ಕೋವಿಡ್​ ವೈರಾಣುವಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ತಮ್ಮ ಹಿತವನ್ನೂ ಲೆಕ್ಕಿಸದೇ ಅಂತ್ಯ ಸಂಸ್ಕಾರ ನೆರವೇರಿಸಿ ಮಾದರಿಯಾದ ರಾಜಾಜಿನಗರದ ಯುವಕರ ಮಾನವೀಯ ಕಾಳಜಿಗೆ ಸಚಿವರು ತಲೆದೂಗಿದ್ದಾರೆ.

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಮುಟ್ಟಲು ಸಂಬಂಧಿಕರೇ ಹಿಂಜರಿಯುತ್ತಿದ್ದರು. ಮುಂದೆ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿ ಕುಳಿತಿದ್ದ ವೇಳೆಯಲ್ಲೇ ಈ ಯುವಕರು ಮುಂದೆ ನಿಂತು ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆಗೆ ಮಾದರಿಯಾಗಿದ್ದಾರೆ.

ಕನಕಪುರ ರಸ್ತೆಯ ತಲಗಟ್ಟಪುರ ಹತ್ತಿರದಲ್ಲಿ ದಂಪತಿ ವಾಸವಾಗಿದ್ದರು. ಈ ವೇಳೆ ಗಂಡನಿಗೆ ಕೋವಿಡ್ ಬಂದು ತೀರಿ ಹೋಗಿದ್ದ. ಅಂತ್ಯಸಂಸ್ಕಾರ ಮಾಡಲು ಯಾರು ಇಲ್ಲ ಎಂಬ ಮಾಹಿತಿ ಸಚಿವರಿಗೆ ಮುಟ್ಟಿತು. ಆದರೆ, ಸಚಿವರು ಚಾಮರಾಜನಗರ ಜಿಲ್ಲೆಯ ಪ್ರವಾಸದಲ್ಲಿದ್ದರು. ಹೀಗಾಗಿ, ತಕ್ಷಣವೇ ಅವರ ಕ್ಷೇತ್ರದ ಯುವ ಗೆಳೆಯರಿಗೆ ಕರೆ ಮಾಡಿ ಅಗತ್ಯ ನೆರವು ನೀಡುವಂತೆ ಕರೆಕೊಟ್ಟರು.

ವ್ಯಕ್ತಿ ಮನೆಯ ಕೋಣೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದ್ದಾರೆ. ಹೆಂಡತಿ ಕೋಣೆಗೆ ಹೋಗಿ ನೋಡಿದರೆ ಗಂಡ ಮರಣ ಹೊಂದಿರುವುದು ಗೊತ್ತಾಗಿದೆ. ಇದರಿಂದ ಹೆಂಡತಿಯು ಗಾಬರಿಯಾಗಿ ಏನು ಮಾಡಬೇಕೆಂದು ತಿಳಿಯದೆ ದಿಗ್ಬ್ರಮೆಗೊಂಡಿದ್ದಾರೆ. ಸಾವಿನ ವಿಚಾರ ತಿಳಿಯುತ್ತಿದ್ದಂತೆ ಅಕ್ಕ-ಪಕ್ಕದ ಮನೆಯವರಿಗೆ ವಿಷಯ ತಿಳಿಸಿ, ಮೈಸೂರಿನಲ್ಲಿರುವ ಗಂಡನ ಸಂಬಂಧಿಕರಿಗೆ ಕರೆ ಮಾಡಿ ಸಾವಿನ ಸುದ್ದಿ ಮುಟ್ಟಿಸಿದ್ದಾಳೆ.

ಮೈಸೂರಿನಿಂದ ಕಾರಿನಲ್ಲಿ ಓಡೋಡಿ ಬಂದ ಸಂಬಂಧಿಕರು ಕೊರೊನಾ ಸೋಂಕಿಗೆ ಹೆದರಿ ಮನೆ ಒಳಗೂ ಕಾಲಿಡಲಿಲ್ಲ. ಕನಿಷ್ಠ ಶವವನ್ನು ಸಹ ನೋಡಲು ಮನಸ್ಸು ಕರಗಲಿಲ್ಲ. ಮನೆಯ ಮುಂದಿನ ನಿಲ್ಲಿಸಿದ್ದ ಕಾರಿನಲ್ಲೇ ರಾತ್ರಿ ಇಡೀ ಕಳೆದಿದ್ದಾರೆ.

ಬದುಕಿಗೆ ಆಸರೆ ಆಗಬೇಕಿದ್ದ ಗಂಡ ಮನೆಯ ಒಂದು ಕೊಠಡಿಯಲ್ಲಿ ಇಹಲೋಕ ತ್ಯಜಿಸಿದ ಚಿರ ನಿದ್ರೆಗೆ ಜಾರಿ ಶವವಾಗಿ ಮಲಗಿದ್ದರೇ, ರಕ್ತ ಸಂಬಂಧಿಕರು ಎನಿಸಿಕೊಂಡವರು ಮನೆಯ ಹೊಸ್ತಲು ತುಳಿಯದೆ ಕಾರಲ್ಲೇ ಕುಳಿತುಬಿಟ್ಟಿದ್ದಾರೆ. ಪತಿಯ ಅಂತ್ಯಕ್ರಿಯೆ ಹೇಗೆಂದು ಹೆಣ ಬಾರದ ಚಿಂತೆಯ ನೋವು ಹೊತ್ತ ಪತ್ನಿ ಹಾಲ್​ನಲ್ಲಿ ಒಂಟಿಯಾಗಿದ್ದಾಳೆ.

ಇದೇ ವೇಳೆ ಸಚಿವರ ಯುವ ಗೆಳೆಯರಾದ ಗಿರೀಶ್, ಲಿಂಗರಾಜು, ಉಮೇಶ್ ಹಾಗೂ ಪ್ರವೀಣ್ ನೆರವಿಗೆ ಧಾವಿಸಿ ಸಹಾಯದ ಹಸ್ತ ಚಾಚಿದ್ದಾರೆ. ತಕ್ಷಣವೇ ಯುವಕರು ಸ್ಥಳೀಯ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ, ಕೈಗೊಳ್ಳಬೇಕಾದ ಮುಂಜಾಗ್ರತೆ ಹಾಗೂ ಅವರಿಂದ ಮೃತ ಪ್ರಮಾಣ ಪತ್ರ ಪಡೆದು ಕೆಂಗೇರಿಯ ಚಿತಗಾರದಲ್ಲಿ ಶವದ ಅಂತಿಮ ಕಾರ್ಯಕ್ಕೆ ವ್ಯವಸ್ಥೆ ಮಾಡಿ ಮುಗಿಸಿದ್ದಾರೆ.

ಸಂಸ್ಕಾರದ ವೇಳೆ ಶವದ ಪರವಾಗಿ ಒಬ್ಬ ಸಂಬಂಧಿ ಬಿಟ್ಟು ಯಾರು ಸಹ ಇರಲಿಲ್ಲ. ಅವರು ಶವದ ಹತ್ತಿರವಿರಲಿ, ವಾಹನ ಹತ್ತಿರ ಬರಲೂ ಹೆದರುತ್ತಿದ್ದರು. ಯುವ ಗೆಳೆಯರು ಮೃತದೇಹದ ಪೂಜಾ ಕಾರ್ಯವನ್ನೂ ಮುಗಿಸಿ ಅಂತಿಮ ಸಂಸ್ಕಾರ ಮಾಡಿ ಬಂದರು.

ಧೈರ್ಯದಿಂದ, ಒಳ್ಳೆ ಮನಸ್ಸಿನಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ ಮತ್ತು ತಮ್ಮ ವೈಯಕ್ತಿಕ ಹಿತವನ್ನೂ ಲೆಕ್ಕಿಸದೇ ಆ ಕಾರ್ಯ ಮಾಡಿದ ಗಿರೀಶ್, ಲಿಂಗರಾಜು, ಉಮೇಶ್ ಹಾಗೂ ಪ್ರವೀಣ್ ಅವರಿಗೆ ಸಚಿವ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ. ಸಮಾಜದಲ್ಲಿ ಇಂತಹ ಯುವಕರ ಪಡೆ ಇನ್ನಷ್ಟು ಹೆಚ್ಚಾಗಿ ಮಾನವೀಯ ಕಾರ್ಯಕ್ಕೆ ಕೈಜೋಡಿಸಲಿ ಎಂದು ಸಚಿವರು ಅವರ ವೈಖರಿ ಶ್ಲಾಘಿಸಿದ್ದಾರೆ.

Last Updated : Apr 17, 2021, 5:50 PM IST

ABOUT THE AUTHOR

...view details