ಬೆಂಗಳೂರು :ಕೊರೊನಾ ಬಂದಮೇಲೆ ಸ್ವಚ್ಛತೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಕೋವಿಡ್ನಿಂದ ರಕ್ಷಿಸಿಕೊಳ್ಳಲು ಸ್ವಚ್ಛತೆಯ ಮಂತ್ರವನ್ನು ಪಠಿಸುತ್ತಿರುವ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಂಡಿವೆ. ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಸ್ವಚ್ಛತೆಯ ಗುಣಮಟ್ಟ ಹೆಚ್ಚಿದ್ದರೆ ಇನ್ನೂ ಕೆಲವೆಡೆ ನೈರ್ಮಲ್ಯಕ್ಕಾಗಿ ಪರಿತಪಿಸುವ ಸ್ಥಿತಿ ಇದೆ.
ಬ್ಲಾಕ್ ಸ್ಪಾಟ್ ಜಾಗಗಳಲ್ಲಿ ರಂಗೋಲಿ ಮೂಲಕ ಜನಜಾಗೃತಿ:ಕೋವಿಡ್ ರೋಗ ಹೆಚ್ಚಾಗಿ ಹರಡದಂತೆ ಬೆಂಗಳೂರು ನಗರ ನೈರ್ಮಲ್ಯ ಕಾಪಾಡಲು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗ ಹೆಚ್ಚು ಶ್ರಮಿಸುತ್ತಿದೆ. ಪ್ರತಿನಿತ್ಯ ಮನೆಗಳಿಂದ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಸಿಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜನ ರಾತ್ರಿ ಹೊತ್ತಲ್ಲಿ ರಸ್ತೆ ಬದಿ, ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಎಸೆಯದಂತೆ ಮಾರ್ಷಲ್ಸ್ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತೀ ವಾರ್ಡ್ ಗಳ ಕಸ ರಾಶಿ ಹಾಕುವ ಜಾಗಗಳನ್ನು ದಿನಕ್ಕೊಂದರಂತೇ ಸ್ವಚ್ಛ ಮಾಡಿ ಆ ಜಾಗದಲ್ಲಿ ರಂಗೋಲಿ ಹಾಕಿ ಕಸ ಹಾಕದಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.
ಕೋಟಿ-ಕೋಟಿ ಸುರಿದರೂ ಕುಂದಾನಗರಿಗೆ ಸಿಗುತ್ತಿಲ್ಲ ಸ್ವಚ್ಛ ನಗರದ ಮನ್ನಣೆ :58 ವಾರ್ಡ್‍ಗಳನ್ನು ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆಗೆ ವರ್ಷಕ್ಕೆ ಬರೊಬ್ಬರಿ 19 ಕೋಟಿ ರೂ. ವೆಚ್ಚ ಮಾಡುತ್ತದೆ. ಬೆಳಗ್ಗೆ ಆರು ಗಂಟೆಯಿಂದ ತ್ಯಾಜ್ಯ ಸಂಗ್ರಹ ಕೆಲಸ ಆರಂಭವಾಗುತ್ತದೆ. ಮಾರ್ಕೆಟ್, ಹೋಟೆಲ್‍ಗಳ ತ್ಯಾಜ್ಯ ಸಂಗ್ರಹಕ್ಕೆ ವಿಶೇಷ ತಂಡವನ್ನೂ ಕೂಡ ನೇಮಿಸಲಾಗಿದೆ. ನಗರದ ಪ್ರತಿ ಬಡಾವಣೆಗೆ ಡೋರ್ ಟು ಡೋರ್ ಕಸ ಸಂಗ್ರಹಣೆ ಮಾಡಲಾಗುತ್ತದೆ. ಆದರೂ ಕುಂದಾನಗರಿಗೆ ಮಾತ್ರ ಸ್ವಚ್ಛ ನಗರದ ಮನ್ನಣೆ ದೊರೆಯುತ್ತಿಲ್ಲ. ಕೆಲವೆಡೆ ಪ್ರತಿನಿತ್ಯ ಡೋರ್ ಟು ಡೋರ್ ಕಸ ಸಂಗ್ರಹವಾಗದ ಕಾರಣ ಸ್ಥಳೀಯರು ಕಸವನ್ನು ಖಾಲಿ ಜಾಗದಲ್ಲಿ ಎಸೆಯುತ್ತಿದ್ದಾರೆ. ಈ ಕಾರಣಕ್ಕೆ ಬೆಳಗಾವಿಗೆ ಈವರೆಗೆ ಸ್ವಚ್ಛನಗರದ ಗರಿ ಸಿಕ್ಕಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.