ಬೆಂಗಳೂರು:ಇದೀಗ ಕೋವಿಡ್-19 ಸಂಬಂಧ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪದ ಅಬ್ಬರ ಜೋರಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಕೋವಿಡ್ ಪರಿಕರ ಖರೀದಿ ಸೇರಿ ಒಟ್ಟು 2 ಸಾವಿರ ಕೋಟಿ ರೂ. ಭ್ರಷ್ಟಾಚಾರದ ಆರೋಪ ಮಾಡಿದ್ದರೆ, ಇತ್ತ ಬಿಜೆಪಿ ಸರ್ಕಾರ ಕಾಂಗ್ರೆಸ್ ಆರೋಪಕ್ಕೆ ದಾಖಲೆ ಸಮೇತ ಕೋವಿಡ್ಗಾಗಿ ಒಟ್ಟು ಖರ್ಚಾಗಿದ್ದು 2,118 ಕೋಟಿ ರೂ. ಮಾತ್ರ ಎಂಬ ಕೌಂಟರ್ ನೀಡಿದೆ.
ಕೊರೊನಾ ಹಾವಳಿ ರಾಜ್ಯದಲ್ಲಿ ದಿನೆ ದಿನೆ ಹೆಚ್ಚಾಗುತ್ತಿದ್ದರೆ, ಇತ್ತ ಸರ್ಕಾರ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪದ ಸದ್ದು ಹೆಚ್ಚಾಗುತ್ತಿದೆ. ಕೋವಿಡ್-19 ಉಪಕರಣ ಖರೀದಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾಖಲೆ ಸಮೇತ ಆರೋಪ ಮಾಡುತ್ತಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ನ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಸರ್ಕಾರ, ಅವರ ಆರೋಪಕ್ಕೆ ಇಂಚಿಂಚಾಗಿ ಕೌಂಟರ್ ನೀಡಲು ತಮ್ಮ ಸಚಿವರನ್ನು ಕಣಕ್ಕಿಳಿಸಿದೆ. ಅಷ್ಟಕ್ಕೂ ಕಾಂಗ್ರೆಸ್ ಮಾಡುತ್ತಿರುವ ಆರೋಪ ಏನು? ಅದಕ್ಕೆ ಸರ್ಕಾರ ನೀಡುತ್ತಿರುವ ಸ್ಪಷ್ಟೀಕರಣ ಏನು ಎಂಬದರ ಸಂಪೂರ್ಣ ವರದಿ ಇಲ್ಲಿದೆ.
ಕಾಂಗ್ರೆಸ್ ಆರೋಪ ಏನು..?
ಕೋವಿಡ್ ಸಂಬಂಧ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಜಂಟಿ ಸುದ್ದಿಗೋಷ್ಠಿ ನಡೆಸಿ, ತಮಗೆ ಸಿಕ್ಕಿರುವ ದಾಖಲೆಯೊಂದಿಗೆ ಕೋವಿಡ್-19 ಪರಿಕರ ಖರೀದಿ ಸೇರಿದಂತೆ ಒಟ್ಟು 2,000 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಕೊರೊನಾಗಾಗಿ ಬಿಬಿಎಂಪಿಗೆ 200 ಕೋಟಿ ರೂ., ಆರೋಗ್ಯ ಇಲಾಖೆಗೆ 750 ಕೋಟಿ ರೂ., ಜಿಲ್ಲಾಡಳಿತಕ್ಕೆ ಎಸ್ಡಿಆರ್ಎಫ್ ಮೂಲಕ 340 ಕೋಟಿ ರೂ., ಕಾರ್ಮಿಕ ಇಲಾಖೆ ಮೂಲಕ 1,000 ಕೋಟಿ ರೂ., ಶಿಕ್ಷಣ ಇಲಾಖೆಗೆ 815 ಕೋಟಿ. ರೂ., ಸಮಾಜ ಕಲ್ಯಾಣ, ಆಹಾರ, ಪೊಲೀಸ್, ಗೃಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 500 ಕೋಟಿ ರೂ., ಹಾಸಿಗೆ ದಿಂಬು ಖರೀದಿಗೆ 150 ಕೋಟಿ ರೂ., ಸೇರಿ ಒಟ್ಟು 4,167 ಕೋಟಿ ರೂ. ಮೊತ್ತದ ಖರೀದಿ ಮಾಡಲಾಗಿದೆ. ಆ ಮೂಲಕ ಸುಮಾರು 2 ಸಾವಿರ ಕೋಟಿ ರೂ. ಅಕ್ರಮ ಎಸಗಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಆರೋಗ್ಯ ಇಲಾಖೆ 9.65 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದೆ. ಮಾರುಕಟ್ಟೆಯಲ್ಲಿ ಒಂದು ಕಿಟ್ ಬೆಲೆ 330 ರೂ.ಇದೆ. ಇದರಲ್ಲಿ ಮಹಾರಾಷ್ಟ್ರದ ಖಾಸಗಿ ಸಂಸ್ಥೆಯೊಂದರಿಂದ 3.5 ಲಕ್ಷ ಕಿಟ್ ಖರೀದಿಸಿದ್ದರು. ಇದು ಕಳಪೆ ಎಂದು ಆರೋಪಿಸಿದ ಮೇಲೆ 1.20 ಲಕ್ಷ ಕಿಟ್ ವಾಪಸ್ ಮಾಡಲಾಯಿತು. ಇವು ಒಂದಕ್ಕೆ 2,117 ರೂ. ಕೊಟ್ಟು ಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.