ಬೆಂಗಳೂರು :ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆ ಆರಂಭವಾಗಲಿದೆ. ಈ ಹಿನ್ನೆಲೆ ಆರೋಗ್ಯ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ವಿವಿಧೆಡೆ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕೋವಿಡ್ ಹೆಚ್ಚಳ ಹಿನ್ನೆಲೆ, ಲಸಿಕೆ ವಿತರಿಸಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೂಡ ಶಿಫಾರಸು ಮಾಡಿದೆ. ಹೀಗಾಗಿ, ಇಲಾಖೆಯು ದಿನವೊಂದಕ್ಕೆ 3 ಲಕ್ಷ ಲಸಿಕೆ ವಿತರಿಸುವ ಗುರಿ ಹೊಂದಿದೆ. ಸದ್ಯ 3500ಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗ್ತಿದೆ. ರಾಜ್ಯದ 8,871 ಆರೋಗ್ಯ ಉಪಕೇಂದ್ರಗಳನ್ನು ಕೂಡ ಹಂತ ಹಂತವಾಗಿ ಲಸಿಕೆ ಕೇಂದ್ರವಾಗಿ ಪರಿವರ್ತಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಈವರೆಗೆ ಕೋವಿಡ್ ಲಸಿಕೆ ಪಡೆದವರ ವಿವರ :
- ರಾಜ್ಯದಲ್ಲಿ ಮಂಗಳವಾರ 45-59 ವರ್ಷದವರೆಗಿನ ಇತರ ಕಾಯಿಲೆ ಇರುವ ಜನರು ಒಟ್ಟು 14,789 ಮಂದಿ ಮೊದಲ ಡೋಸ್ ಪಡೆದಿದ್ದು, 102 ಮಂದಿ 2ನೇ ಡೋಸ್ ಪಡೆದಿದ್ದಾರೆ.
- 60 ವರ್ಷ ಮೇಲ್ಪಟ್ಟ 29,314 ಮಂದಿ ಕೋವಿಡ್ ಮೊದಲನೇ ಡೋಸ್ ಹಾಗೂ 417 ಮಂದಿ 2ನೇ ಡೋಸ್ ಪಡೆದಿದ್ದಾರೆ.
- ಒಟ್ಟಿನಲ್ಲಿ 35,90,581 ಮಂದಿ ರಾಜ್ಯದಲ್ಲಿ ಈವರೆಗೆ ಕೋವಿಡ್ ಲಸಿಕೆ ಪಡೆದಿದ್ದಾರೆ.