ಬೆಂಗಳೂರು :ರಾಜ್ಯದಲ್ಲಿ ಪರೀಕ್ಷೆಗೊಳಪಡಿಸಿದ ಜನರಲ್ಲಿ ಶೇಕಡಾ 1.06 ರಷ್ಟು ಕೋವಿಡ್ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಟೆಸ್ಟ್ ಚುರುಕುಗೊಳಿಸಲಾಗಿದೆ. ಸ್ವಯಂಪ್ರೇರಿತರಾಗಿ ಟೆಸ್ಟಿಂಗ್ ಸೆಂಟರ್ಗೆ ಜನರು ಬರುತ್ತಿರುವುದರಿಂದ ತಪಾಸಣೆ ಕಾರ್ಯ ಸರಾಗವಾಗಿ ನಡೆಯುತ್ತಿದೆ.
ಪ್ರತಿ ದಿನ ರಾಜ್ಯದಲ್ಲಿ 5 ಸಾವಿರ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಪಾಲಿಕೆ ಕನಿಷ್ಠ ಪಕ್ಷ 1,500 ಟೆಸ್ಟ್‌ಗಳನ್ನು ಪೂರೈಸಲು ಗುರಿ ಇಟ್ಟುಕೊಂಡಿದೆ. ಹೀಗಾಗಿ, ನಗರದ ಹಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಟೆಸ್ಟಿಂಗ್ ಸ್ಪಾಟ್ ಮಾಡಲಾಗಿದ್ದು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟೆಸ್ಟಿಂಗ್ ಕಡ್ಡಾಯಗೊಳಿಸಲಾಗಿದೆ. ಈವರೆಗೆ 1791 ಆರ್.ಟಿ.ಪಿ.ಸಿ.ಆರ್ ಹಾಗೂ 472 ಆರ್.ಎ.ಟಿ ಟೆಸ್ಟ್‌ಗಳನ್ನು ಮಾಡಲಾಗಿದೆ ಮತ್ತು 93 ಪಾಸಿಟಿವ್ ಕೇಸ್‌ಗಳು ವರದಿಯಾಗಿದೆ. ಪೂರ್ವ ವಲಯದಲ್ಲಿ ಅತಿ ಹೆಚ್ಚು ಕೇಸ್‌ಗಳು ಪತ್ತೆಯಾಗಿವೆ.
ನಗರದ 144 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಚುರುಕುಗೊಂಡಿದೆ. ಪ್ರಮುಖ ಪ್ರದೇಶಗಳಾದ ಶಾಂತಿನಗರ, ವಿಲ್ಸನ್ ಗಾರ್ಡನ್, ಶೇಷಾದ್ರಿಪುರ, ಮಲ್ಲೇಶ್ವರದ ಕೇಂದ್ರಗಳಲ್ಲಿ ಕೊರೋನಾ ಟೆಸ್ಟ್ ನಡೆಸಲಾಗುತ್ತಿದ್ದು, ಸಿಬ್ಬಂದಿಗಳು ಮಾಸ್ಕ್, ಪಿಪಿಇ ಕಿಟ್, ಗ್ಲೌಸ್ಗಳನ್ನು ಧರಿಸಿ ಪರೀಕ್ಷೆ ನಡೆಸುತ್ತಿದ್ದಾರೆ.
ತುಷಾರ್ ಗಿರಿನಾಥ್ ಪ್ರತಿಕ್ರಿಯೆ :ಪ್ರಕರಣಗಳನ್ನು ಎದುರಿಸಲು ಆರೋಗ್ಯ ವಿಭಾಗದಲ್ಲಿ ಯಾವುದೇ ಕೊರತೆ ಇಲ್ಲ. ಅಗತ್ಯ ಸಿಬ್ಬಂದಿ ಮತ್ತು ಪರಿಕರಗಳನ್ನು ವಿವಿಧ ವಿಭಾಗಗಳ ಮೂಲಕ ಕ್ರೋಢೀಕರಿಸಿಕೊಂಡು ರೋಗಿಗಳ ಆರೈಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.