ಬೆಂಗಳೂರು: ಕೊರೊನಾ ವೈರಸ್ ಕೇವಲ ಶಾಲಾ-ಕಾಲೇಜಗಳ ವಿದ್ಯಾರ್ಥಿಗಳು, ಪರೀಕ್ಷೆ ಹಾಗೂ ಶಾಲೆ ಆರಂಭಕ್ಕೆ ಅಷ್ಟೇ ಅಡ್ಡಗಾಲು ಹಾಕಿಲ್ಲ. ಬದಲಾಗಿ ಶಿಕ್ಷಣದ ವ್ಯಾಪ್ತಿಗೆ ಬರುವ ಕೋಚಿಂಗ್ ಸೆಂಟರ್‌ಗಳಿಗೂ ಸಂಕಷ್ಟ ತಂದೊಡ್ಡಿದೆ. ಕೋಚಿಂಗ್ ಕೊಡುವ ವಿಷಯ ತಜ್ಞರಿಂದ ಹಿಡಿದು ಅಭ್ಯರ್ಥಿಗಳವರೆಗೆ ತೊಂದರೆಯುಂಟಾಗಿದೆ.
ಕೋಚಿಂಗ್ ಸೆಂಟರ್‌ಗಳಿಗೂ ಹೊಡೆತ ನೀಡಿದ ಕೋವಿಡ್-19! ರಾಜ್ಯದಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಜಂಟಿ ಪ್ರವೇಶ ಪರೀಕ್ಷೆ (JEE), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಿ ನಡೆಸುತ್ತಿರುತ್ತಾರೆ. ಆದರೆ ಈ ಬಾರಿ ಕೊರೊನಾರ್ಭಟಕ್ಕೆ ಪರೀಕ್ಷಾ ಆಕಾಂಕ್ಷಿಗಳು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ.
ಒಂದು ಕಡೆ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವಾದರೆ, ಕೋಚಿಂಗ್ ಕ್ಲಾಸ್‌ಗಳಿಗೆ ಹೋಗಲಾಗದ ಪರಿಸ್ಥಿತಿ ಇದೆ. ಮತ್ತೊಂದು ಕಡೆ ಪರೀಕ್ಷಾರ್ಥಿಗಳನ್ನ ತಯಾರು ಮಾಡುವ ಉಪನ್ಯಾಸಕರ ಪಾಡು ಹೇಳತೀರದ್ದಾಗಿದೆ. ಖಾಲಿ ಕೈ ಜೀವನ ಅವರದ್ದಾಗಿದೆ. ಕೊರೊನಾದಿಂದಾಗಿ ಅವರಿಗೆ ಕೋಚಿಂಗ್ ಸೆಂಟರ್‌ಗಳಿಗೆ ಬರಲು ಆಗುತ್ತಿಲ್ಲ.
ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ನಡೆಸುವುದಕ್ಕೆ ಸೆಂಟರ್‌ಗಳು ತಯಾರಿ ನಡೆಸಿದ್ದರೂ ಸರ್ಕಾರ ಇದಕ್ಕೆ ಅವಕಾಶ ನೀಡುತ್ತಿಲ್ಲ. ಅನ್ಯ ರಾಜ್ಯಗಳಲ್ಲಿ ಪರೀಕ್ಷೆ ವೇಳೆ ಹಲವು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಇದಕ್ಕೆ ಕಾರಣ. ಹೀಗಾಗಿ, ದೈಹಿಕವಾಗಿ ಒಂದು ಕೊಠಡಿಯಲ್ಲಿ ಸೇರಿ ಪಾಠ,ಪ್ರವಚನ ಸಾಧ್ಯವಾಗದೇ ಇದ್ದರೂ ಪರ್ಯಾಯವಾಗಿ ಆನ್‌ಲೈನ್ ಮೊರೆ ಹೋದರೂ ಅಲ್ಲೂ ಹತ್ತು ಹಲವು ಸವಾಲುಗಳು ಎದುರಾಗುತ್ತಿವೆ.
ಯುನಿವರ್ಸಲ್ ಕೋಚಿಂಗ್ ಸೆಂಟರ್ ನಿರ್ದೇಶಕ ಉಪೇಂದ್ರ ಶೆಟ್ಟಿ, ಆನ್‌ಲೈನ್ ಕ್ಲಾಸ್ ನಡೆಸಿದರೂ ಗ್ರಾಮೀಣ ಭಾಗದ ಅಭ್ಯರ್ಥಿಗಳನ್ನ ತಲುಪಲು ಸಾಧ್ಯವಾಗುತ್ತಿಲ್ಲ. ಇಂಟರ್‌ನೆಟ್ ಸಮಸ್ಯೆ ಜೊತೆಗೆ ಆಗಾಗ ಕಾಡುವ ತಾಂತ್ರಿಕ ತೊಂದರೆಯಿಂದಾಗಿ ಸರಿಯಾಗಿ ವಿಷಯವಾರು ಪಠ್ಯಕ್ರಮ ಅರ್ಥೈಸುವುದು ಕಷ್ಟವಾಗಿದೆ ಅಂತಾರೆ.
ಕೊರೊನಾ ಪ್ರತಿಯೊಬ್ಬರ ಭವಿಷ್ಯಕ್ಕೂ ಅಡ್ಡಗಾಲು ಹಾಕಿದೆ. ಇದರಿಂದ ಹೊರಬರಲು ಬಹಳ ಸಮಯವೇ ಬೇಕಾಗಿದೆ. ಭವಿಷ್ಯದ ಪರೀಕ್ಷೆಗಳ ಸಿದ್ಧತೆಗೆ ಕಷ್ಟವಾಗಿದ್ದು, ವಿದ್ಯಾರ್ಥಿಗಳು ಜೊತೆಗೆ ಉಪನ್ಯಾಸಕರಿಗೂ ದಾರಿ ತೋರದಾಗಿದೆ.