ಬೆಂಗಳೂರು: ಇಳಿ ವಯಸ್ಸಿನಲ್ಲೂ ಬೆಂಗಳೂರಿನ ವಿವಿಧೆಡೆ ನಿರಾಶ್ರಿತ ವೃದ್ಧರು ಯಾರ ಹಂಗೂ ಇಲ್ಲದೆ, ತರಕಾರಿ, ಹೂ ಹೀಗೆ ಸಣ್ಣಪುಟ್ಟ ವ್ಯಾಪಾರದ ಮೂಲಕ ಜೀವನ ನಡೆಸುತ್ತಿದ್ದವರು. ಆದ್ರೆ, ಮಹಾಮಾರಿ ಕೋವಿಡ್ ಅವರಿಗೆ ಎಂತಹ ಆಘಾತ ನೀಡಿದೆ ಎಂದರೆ ಲಾಕ್‌ಡೌನ್ ಸಡಿಲಿಕೆ ಮಾಡಿದ್ರೂ ಇವರು ಮಾತ್ರ ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ, ಒಪ್ಪೊತ್ತಿನ ಊಟಕ್ಕೆ ಪರದಾಡುವಂತೆ ಮಾಡಿದೆ.
ಲಾಕ್‌ಡೌನ್ ಸಡಿಲಿಸಿದ್ರೂ ಮನೆಯಿಂದ ಹೊರಬಾರದ ಸ್ಥಿತಿ; ಒಪ್ಪೊತ್ತಿನ ಊಟಕ್ಕೂ ಕಷ್ಟ! ವೃದ್ಧಾಪ್ಯದಲ್ಲಿ ನೋಡಿಕೊಳ್ಳಬೇಕಾದ ಮಕ್ಕಳೂ ಸಹ ಒಂಟಿಯನ್ನಾಗಿ ಬಿಟ್ಟು ದೂರಹೋಗಿದ್ದಾರೆ. ಇಂತಹ ನಿರಾಶ್ರಿತ ವೃದ್ಧರಿಗೆ ಲಾಕ್ ಡೌನ್ ಜೀವನವನ್ನು ಮತ್ತಷ್ಟು ಸವಾಲಾಗಿಸಿದೆ. ಪ್ರತಿನಿತ್ಯದ ಕೂಲಿ ನಂಬಿ ಕೆಲಸ ಮಾಡುತ್ತಿದ್ದವರು ಮೂರು ತಿಂಗಳು ಮನೆಯಲ್ಲಿಯೇ ಉಳಿದುಕೊಳ್ಳಬೇಕಾಯಿತು. ಇದ್ರಿಂದಾಗಿ ಸರ್ಕಾರ ಕೊಟ್ಟ ಆಹಾರದ ಕಿಟ್‌ನಲ್ಲೇ ಜೀವನ ಸಾಗಿಸುತ್ತಿದ್ದರು. ಇನ್ನು ಬಾಡಿಗೆಯನ್ನೂ ಕಟ್ಟಲಾಗದೆ 3 ತಿಂಗಳ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಇದೀಗ ಕೋವಿಡ್ ಭೀತಿ ಇದ್ದರೂ ಹೊರಗಡೆ ಬಂದು ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಬಳೆ ವ್ಯಾಪಾರಿ ಸೀತಮ್ಮ.
ಬಳೆ ಮಾರಿ ಬಂದ ದುಡ್ಡಲ್ಲಿ ಬಾಡಿಗೆ ಕಟ್ಬೇಕು ಅಂತಾರೆ ಜೆ.ಪಿ.ಪಾರ್ಕ್ ಬಳಿ ಫುಟ್‌ಪಾತ್‌ನಲ್ಲಿ ಬಳೆ ಮಾರುವ ಸೀತಮ್ಮ. ವೃದ್ಧಾಪ್ಯವೇತನಕ್ಕಾಗಿ ಅಲೆದಾಡಿದ್ರೂ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯ ಹಣವೂ ಲಾಕ್ಡೌನ್ ಸಮಯದಲ್ಲಿ ವೃದ್ಧರಿಗೆ ಕೈ ಸೇರಿಲ್ಲ ಎನ್ನಲಾಗಿದೆ. ಅನಾರೋಗ್ಯ, ಕೊರೊನಾ ಭೀತಿ ನಡುವೆಯೂ ನಗರದ ಮೂಲೆ ಮೂಲೆಯಿಂದ ಕಂದಾಯ ಕಚೇರಿಗೆ ಬಂದು ಪಿಂಚಣಿ ಹಣದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ.
ಲಾಕ್‌ಡೌನ್ ವೇಳೆ ಸಾರ್ವಜನಿಕರ ಓಡಾಟದ ಸ್ಥಳ ಪಾರ್ಕ್‌ಗಳನ್ನೂ ಕೂಡಾ ಬಂದ್ ಮಾಡಲಾಗಿತ್ತು. ಇದರಿಂದಾಗಿ ಬೆಳಗ್ಗೆ, ಸಂಜೆ ವಾಯುವಿಹಾರಕ್ಕಾಗಿ ಬಂದು, ಸ್ನೇಹಿತರ ಜೊತೆ ಮಾತನಾಡಿ ಕಾಲಕಳೆಯುತ್ತಿದ್ದ ನಿವೃತ್ತರಿಗೂ ಸಮಯ ಕಳೆಯುವುದು ಕಷ್ಟವಾಗಿದೆ ಎನ್ನುತ್ತಾರೆ ರಾಮಕೃಷ್ಣ ರಾಜು ಎಂಬ ಸ್ಥಳೀಯರು. ಸದ್ಯ ನಿರ್ಬಂಧಗಳ ಸಡಿಲಿಕೆಯಲ್ಲಿ ಪಾರ್ಕ್‌ಗಳ ಪ್ರವೇಶಕ್ಕೆ ಅವಕಾಶ ನೀಡಿರುವುದರಿಂದ ಹಿರಿಯ ವಾಯುವಿಹಾರಕ್ಕೆ ಬಂದು ಸ್ನೇಹಿತರೊಂದಿಗೆ ಹರಟೆ, ತಮಾಷೆ ಮೂಲಕ ಕಾಲಕಳೆಯುತ್ತಿದ್ದಾರೆ.
ಕೊರೊನಾ ಮಹಾಮಾರಿ ಎಲ್ಲಾ ವಯಸ್ಸಿನ ಜನರಲ್ಲೂ ಭೀತಿ ಹುಟ್ಟಿಸಿದೆ. ಹೆಚ್ಚಾಗಿ ವೃದ್ಧರನ್ನು ಕಾಡುತ್ತಿದೆ. ವಯೋ ಸಹಜ ಖಾಯಿಲೆಯಿಂದಿರುವವರು ಮಹಾಮಾರಿಯಿಂದ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಆದರೂ ಇಳಿವಯಸ್ಸಿನಲ್ಲೂ ದುಡಿದು ತಿನ್ನಬೇಕಾದ ಅಜ್ಜ-ಅಜ್ಜಿಯರಿಗೆ ಬೇರೆ ದಾರಿಯಿಲ್ಲದೆ ದುಡಿಯುತ್ತಿದ್ದಾರೆ. ಸರ್ಕಾರದಿಂದ ಇಂತಹ ವೃದ್ಧರಿಗೆ ಸಿಗಬೇಕಾದ ಸೌಲಭ್ಯಗಳು ಸೂಕ್ತ ಸಮಯಕ್ಕೆ ನೀಡಿದರೆ ಸ್ವಲ್ಪ ಮಟ್ಟಿಗೆಯಾದರೂ ಇವರ ಸಂಕಷ್ಟಕ್ಕೆ ಪರಿಹಾರ ಸಿಕ್ಕಿದಂತಾಗುತ್ತದೆ.