ಬೆಂಗಳೂರು:ಕೊರೊನಾ ಸಾಂಕ್ರಾಮಿಕ ಪಿಡುಗು ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸ್ತಿಲ್ಲ. ಪ್ರತಿದಿನ ಮೂರಂಕಿ ಗಡಿ ದಾಟುತ್ತಿರುವ ವೈರಸ್ ಎಲ್ಲರಲ್ಲೂ ಆತಂಕ ಸೃಷ್ಟಿಸುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ಬಿಬಿಎಂಪಿ ನಗರದಲ್ಲಿ ಮೂರು ಕೋವಿಡ್ ಕೇರ್ ಸೆಂಟರ್‌ಗಳಿಗೆ ಚಾಲನೆ ನೀಡಿದೆ.
15 ದಿನದ ಹಿಂದೆ 300ರಷ್ಟಿದ್ದ ಕೊರೊನಾ ಪ್ರಮಾಣ, ವಾರದ ಹಿಂದೆ 700ಕ್ಕೆ ಏರಿತ್ತು. ಈಗ 900ರ ಗಡಿ ದಾಟಿದೆ. ಹೀಗೆ ಸೋಂಕು ನಿರಂತರವಾಗಿ ಏರುಗತಿಯಲ್ಲೇ ಸಾಗುತ್ತಿದೆ. ಅದರಲ್ಲೂ ನಗರದಲ್ಲಿಯೇ ಅತೀಹೆಚ್ಚು ಕೊರೊನಾ ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿ, ಸೋಂಕು ನಿಗ್ರಹಕ್ಕೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಕಠಿಣ ನಿಯಮಗಳ ಮೊರೆ ಹೋಗಿದೆ.
ಕೋವಿಡ್ ಕೇರ್ ಸೆಂಟರ್ ರಿ ಓಪನ್:
ಈ ಬಗ್ಗೆ ಜನರಲ್ಲಿ ಮನವಿ ಮಾಡಿಕೊಂಡಿರೋ ಸರ್ಕಾರ, ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದೆ. ಕಳೆದ ವರ್ಷ ನಗರದಲ್ಲಿ ನಾಲ್ಕು ಕಡೆ ಬಹುದೊಡ್ಡ ಕೋವಿಡ್ ಕೇರ್ ಸೆಂಟರ್‌ಗಳನ್ನು ಓಪನ್ ಮಾಡಲಾಗಿತ್ತು. ಯಾವಾಗ ಸೋಂಕಿತರ ಪ್ರಕರಣ ಕಡಿಮೆಯಾಯಿತೋ, ಆಗ ಕೋವಿಡ್ ಕೇರ್ಸೆಂಟರ್ಗಳನ್ನು ಮುಚ್ಚಿತ್ತು. ಆದ್ರೀಗ 2ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿರುವುದರಿಂದ ನಗರದ ಕೋವಿಡ್ ಕೇರ್ ಸೆಂಟರ್‌ಗಳನ್ನು ಪುನಃ ತೆರೆದಿದೆ.
ಲಕ್ಷಣ ರಹಿತ ಮಂದಿಗೆ ಚಿಕಿತ್ಸೆ:
ಕೊರೊನಾ 2ನೇ ಅಲೆ ತಡೆಗೆ 3 ಕಡೆ ಕೋವಿಡ್ ಕೇರ್ ಸೆಂಟರ್ ಬಾಗಿಲು ತೆರೆಯಲು ಸಿದ್ಧವಾಗಿದೆ. ನಗರದ ಹಜ್ ಭವನ, ಹೆಚ್‌ಎಎಲ್ ಹಾಗೂ ಕೋರಮಂಗಲ ಕೋವಿಡ್ ಕೇರ್ಸೆಂಟರ್ಗಳನ್ನು ಪುನಾರಂಭ ಮಾಡಲಾಗಿದೆ. ಕೋರಮಂಗಲದ ಕೋವಿಡ್ ಕೇರ್ಸೆಂಟರ್ 263 ಬೆಡ್‌ಗಳನ್ನ ಒಳಗೊಂಡಿದೆ. ಈ ಕೇಂದ್ರಕ್ಕೆ ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಜ್ ಭವನ ಮತ್ತು ಎಚ್‌ಎಎಲ್‌ನಲ್ಲಿನ ಕೋವಿಡ್ ಕೇರ್ ಕೇಂದ್ರಗಳು, ಹಾಸಿಗೆಗಳು ಮತ್ತು ಅಗತ್ಯವಿರುವ ವೈದ್ಯರು, ಸಿಬ್ಬಂದಿಯೊಂದಿಗೆ ಸಿದ್ಧವಾಗಿವೆ. 2ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದರಿಂದ ನಗರದ ಕೋವಿಡ್ ಕೇರ್ ಸೆಂಟರ್ಗಳನ್ನ ರಿ ಓಪನ್ ಮಾಡಲಾಗುತ್ತಿದ್ದು, ಲಕ್ಷಣ ರಹಿತ (ಅಸಿಂಪ್ಟಾಮ್ಯಾಟಿಕ್) ಮಂದಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.