ಬೆಂಗಳೂರು: ಹುಲಿ ಉಗುರು ಡಾಲರ್ ಧರಿಸಿದ ಆರೋಪದಡಿ ಕನ್ನಡ ಬಿಗ್ ಬಾಸ್ ರಿಯಾರಿಟಿ ಶೋ ನಡೆಯುವಾಗಲೇ ಅರಣ್ಯಾಧಿಕಾರಿಗಳಿಂದ ಬಂಧಿತನಾಗಿದ್ದ ಸ್ಪರ್ಧಿ ವರ್ತೂರು ಸಂತೋಷ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಎರಡನೇ ಎಸಿಜೆಎಂ ನ್ಯಾಯಾಲಯವು ನಾಳೆಗೆ ಆದೇಶವನ್ನು ಕಾಯ್ದಿರಿಸಿದೆ.
ಸಂತೋಷ್ ಪರ ವಕೀಲ ನಟರಾಜ್ ಹಾಗೂ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ವಿಚಾರಣೆ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯ ಆದೇಶವನ್ನು ನಾಳೆಗೆ ಕಾಯ್ದಿರಿಸಿದರು. ಹುಲಿ ಉಗುರು ಪೆಂಡೆಂಟ್ ಹೊಂದಿರುವ ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುವಾಗಲೇ ಸಂತೋಷ್ನನ್ನು ಬಂಧಿಸಿದ್ದರು. ಈ ವೇಳೆ ಸಂತೋಷ್ ಧರಿಸಿದ ಹುಲಿ ಉಗುರನ್ನು ವಶಕ್ಕೆ ಪಡೆದುಕೊಂಡಿದ್ದರು.
ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಂಧನವಾಗುತ್ತಿದ್ದಂತೆ ಜಾಮೀನು ಕೋರಿ ಅರ್ಜಿ ಸಂತೋಷ್ ಸಲ್ಲಿಸಿದ್ದರು. ವಿಚಾರಣೆ ನಡೆಸಿ ಆಕ್ಷೇಪಣಾ ಅರ್ಜಿಯನ್ನು ಬುಧವಾರ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿತ್ತು. ನಿನ್ನೆ ಆಕ್ಷೇಪಣಾ ಅರ್ಜಿ ಸಲ್ಲಿಸದೆ ಒಂದು ದಿನ ಕಾಲಾವಕಾಶ ಪಡೆದು ಸರ್ಕಾರಿ ಅಭಿಯೋಜಕರು ಇಂದು ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.
ಆರೋಪಿ ಪರ ವಾದ ಮಂಡಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಕೆ ಎನ್ ನಟರಾಜ್, ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ ಸಂತೋಷ್ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ. ಹುಲಿ ಉಗುರಿನ ಡಾಲರ್ ಧರಿಸಿರುವ ಆರೋಪದಡಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ನನ್ನ ಕಕ್ಷಿದಾರನನ್ನು ವೀರಪ್ಪನ್ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಹುಲಿ ಉಗುರು ಪೆಂಡೆಂಟ್ ಹೊಂದಿರುವ ನಟ- ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳು ಸಂತೋಷ್ ಬಂಧನಕ್ಕೂ ಮುನ್ನ ಯಾಕೆ ನೋಟಿಸ್ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಹೊಸೂರು ಮೂಲದ ವ್ಯಕ್ತಿಯೋರ್ವನಿಂದ ಹುಲಿ ಉಗುರು ಖರೀದಿ ಮಾಡಿರುವುದು ಉಹಾಪೋಹ. ಸಂತೋಷ್ ಮನೆಯಲ್ಲಿ ಅನಾದಿ ಕಾಲದಿಂದಲೂ ಹುಲಿ ಉಗುರು ಇತ್ತು ಎಂದು ತಿಳಿಸಿದರು.
ಇದನ್ನೂ ಓದಿ :ಬಿಗ್ ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅರೆಸ್ಟ್.. ಕಾರಣವೇನು?