ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ಸಂದರ್ಭದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಧ್ವಂಸಗೊಳಿಸಿದ ಆರೋಪದಡಿ ಬಂಧಿತರಾಗಿರುವ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಶಾಸಕರ ಮನೆ ಧ್ವಂಸಗೊಳಿಸಿದ ಆರೋಪದಡಿ ಬಂಧಿತರಾಗಿರುವ ಅರುಣ್ ಮನೋರಾಜ್ ಮತ್ತು ಸಂತೋಷ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನಗರದ 66 ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಆರೋಪಿಗಳ ವಿರುದ್ಧ ಗುರುತರ ಆರೋಪವಿರುವ ಕಾರಣ ಹಾಗೂ ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ತಿರಸ್ಕರಿಸಿ ಆದೇಶಿಸಿತು.
ಇದಕ್ಕೂ ಮುನ್ನ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಆರೋಪಿಗಳು ಶಾಸಕರ ಮನೆಯನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಶಾಸಕರು ನೀಡಿರುವ ಹೇಳಿಕೆಯಲ್ಲಿ ಆರೋಪಿಗಳಿಗೆ ತಮ್ಮ ವಿರುದ್ಧ ದ್ವೇಷ ಇತ್ತು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಅರುಣ್ ಮನೋರಾಜ್ ಇತರೆ ಆರೋಪಿಗಳನ್ನು ಪ್ರಚೋದಿಸಿ ಅವರೊಂದಿಗೆ, ಶಾಸಕರ ಮನೆ ಮೇಲೆ ದಾಳಿ ನಡೆಸಿದ್ದಾನೆ. ಇದರಿಂದಾಗಿ ಶಾಸಕರ ಮನೆ, ಕಚೇರಿ ಹಾಗೂ ಶಾಸಕರ ಸಂಬಂಧಿಕರ ಮನೆಗಳೂ ಧ್ವಂಸವಾಗಿವೆ.
ಅಲ್ಲದೇ, ಆರೋಪಿ ಅರುಣ್ ಮನೋರಾಜ್ ಘಟನೆ ಬಳಿಕ ತನ್ನ ಕಾಲ್ ರೆಕಾರ್ಡ್ಸ್, ವಾಟ್ಸಾಪ್ ಮೆಸೇಜ್ ಹಾಗೂ ಟೆಕ್ಸ್ಟ್ ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದಾನೆ. ಘಟನೆಯಲ್ಲಿ 57 ಪೊಲೀಸ್ ವಾಹನಗಳು, 181 ಖಾಸಗಿ ವಾಹನಗಳು ಸೇರಿದಂತೆ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ನಾಶವಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಆರೋಪಿಗಳಿಗೆ ಜಾಮೀನು ನೀಡಿಬಾರದು ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದರು. ವಿಶೇಷ ಅಭಿಯೋಜದರ ವಾದ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶಿಸಿತು.