ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಬೆದರಿಕೆ ಹಾಕಿದ ಪ್ರಕರಣದಲ್ಲಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ತಿರಸ್ಕರಿಸಿತು.
ಯೋಗೀಶ್ ಸಹೋದರ ಗುರುನಾಥ್ ಗೌಡ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಲು ನ್ಯಾಯಾಧೀಶರಾದ ಜೆ.ಪ್ರೀತ್ ಅವರು ಪುರಸ್ಕರಿಸಿದ್ದು, ಹುಬ್ಬಳ್ಳಿ-ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಸಿದ್ದ ಬಿ ವರದಿಯನ್ನು ತಿರಸ್ಕರಿಸಿ ಆದೇಶಿಸಿದರು.
ತನಿಖಾಧಿಕಾರಿಯು ದೂರುದಾರನನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಲ್ಲದೇ, ದೂರುದಾರರಿಂದ ಯಾವುದೇ ದಾಖಲೆಯನ್ನೂ ಪಡೆದುಕೊಂಡಿಲ್ಲ. ಆರೋಪಿಗಳ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಧ್ವನಿ ರೆಕಾರ್ಡಿಂಗ್ ಮತ್ತು ಸಿಸಿಟಿವಿ ತುಣುಕುಗಳಿವೆ ಎಂದಿದೆ.
ಆದರೆ, ಅವುಗಳನ್ನು ಸ್ವೀಕರಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಬಹುದಿತ್ತು. ಡಿಜಿಟಲ್ ಸಾಕ್ಷಿಯನ್ನು ಸಂಗ್ರಹಿಸುವ ತೊಂದರೆಯನ್ನಾದರೂ ತನಿಖಾಧಿಕಾರಿ ತೆಗೆದುಕೊಳ್ಳಬಹುದಿತ್ತು. ಮೌಖಿಕ ಸಾಕ್ಷ್ಯಕ್ಕಿಂತ ಡಿಜಿಟಲ್ ಸಾಕ್ಷಿಯು ಮಹತ್ತರ ಪಾತ್ರವಹಿಸಲಿದೆ. ಆದರೆ, ಅದನ್ನು ಸಂಪೂರ್ಣವಾಗಿ ತನಿಖಾಧಿಕಾರಿ ನಿರ್ಲಕ್ಷಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ತನಿಖಾಧಿಕಾರಿಯು ಐವರು ಸಾಕ್ಷಿಗಳ ಹೇಳಿಕೆ ದಾಖಲಿಸಿ, ಸ್ಥಳ ಮಹಜರ್ ನಡೆಸಿ, ಯಾವುದೇ ಪ್ರಕರಣವಿಲ್ಲ ಎಂದು ಬಿ ವರದಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ದೂರುದಾರರನ್ನು ವಿಚಾರಣೆಯಲ್ಲಿ ಭಾಗಿಯಾಗಲು ಮತ್ತು ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ನೊಟೀಸ್ ಅನ್ನೂ ಜಾರಿ ಮಾಡಿಲ್ಲ. ಆರೋಪಿಗಳನ್ನು ತನಿಖೆಗೂ ಕರೆದಿಲ್ಲ. ನ್ಯಾಯಯುತ ತನಿಖೆ ನಡೆಸುವುದರಿಂದ ತಪ್ಪಿಸಿಕೊಳ್ಳಲು ತನಿಖಾಧಿಕಾರಿ ಪ್ರಯತ್ನಿಸಿದ್ದಾರೆ ಎಂಬುದು ತಿಳಿಯುತ್ತದೆ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಜೊತೆಗೆ, ಧಾರವಾಡದ ಉಪನಗರ ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಅಂತಿಮ ವರದಿಯನ್ನು ಶೀಘ್ರದಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ತಾನು ಸಾಕ್ಷಿಯಾಗಿದ್ದು, ಆರೋಪಿಗಳು ಸಾಕ್ಷಿ ನುಡಿಯವುದಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಗುರುನಾಥ್ ಗೌಡರ್ ಸಿಆರ್‌ಪಿಸಿ ಸೆಕ್ಷನ್ 195ಎ ಅಡಿ ಅರ್ಜಿ ಧಾರವಾಡದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ವ್ಯಾಪ್ತಿ ಹೊಂದಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಪ್ರಕರಣವನ್ನು ತನಿಖೆಗಾಗಿ 2019ರ ಏಪ್ರಿಲ್ 8ರಂದು ಧಾರವಾಡದ ಉಪನಗರ ಠಾಣೆಗೆ ವರ್ಗಾಯಿಸಲಾಗಿತ್ತು.
ಆರೋಪಿ ಡಿವೈಎಸ್‌ಪಿಗಳಾದ ತುಳಜಪ್ಪ ಸುಲ್ಪಿ, ಚಂದ್ರಶೇಖರ್ ಹಾಗೂ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 195ಎ ಜೊತೆ 34ರ ಅಡಿ ದಾಖಲಿಸಿದ್ದ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಅವರು ಬಿ ರಿಪೋರ್ಟ್ ಸಲ್ಲಿಸಿದ್ದರು.
ಇದನ್ನೂ ಓದಿ:ಸಾಲ ಹಿಂದಿರುಗಿಸುವಂತೆ ಒತ್ತಡ ಹಾಕುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ : ಹೈಕೋರ್ಟ್