ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಲಿಂಗಾಯುತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬುದಾಗಿ ಅರ್ಥೈಸುವಂತೆ ಕಾಂಗ್ರೆಸ್ ನಾಯಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದು ಪಡಿಸಿ ಆದೇಶಿಸಿದೆ.
ಸಿದ್ದರಾಮಯ್ಯ ವಿರುದ್ಧ ಹುಬ್ಬಳ್ಳಿಯ ಶಂಕರ್ ಶೇಟ್ ಮತ್ತು ಮಲ್ಲಯ್ಯ ಶಿವಲಿಂಗಯ್ಯ ಹಿರೇಮಠ ಅವರು ದಾಖಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೆ.ಪ್ರೀತ್ ಅವರು ಈ ಆದೇಶ ಮಾಡಿದ್ದಾರೆ. ಅಲ್ಲದೇ, ಪ್ರಕರಣದಲ್ಲಿ ಪ್ರತಿವಾದಿಯವರ ಹೇಳಿಕೆ ಇಡೀ ಲಿಂಗಾಯತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿಲ್ಲ. ಅಥಾವ ಇಡೀ ಲಿಂಗಾಯತ ಸಮುದಾಯವನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ. ಜತೆಗೆ, ಅವರು ನೀಡಿರುವ ಪ್ರತಿಕ್ರಿಯೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರಿಗೆ ಮಾತ್ರ ಸಂಬಂಧಿಸಿದಂತಿದೆ.
ಸಿದ್ದರಾಮಯ್ಯ ಹೇಳಿಕೆ ಲಿಂಗಾಯತ ಸಮುದಾಯಕ್ಕೆ ಯಾವುದೇ ರೀತಿ ಮಾನಹಾನಿಕರವಲ್ಲ:ಇದರಿಂದ ದೂರದಾರರಾಗಿರುವವರಿಗೆ ಯಾವುದೇ ರೀತಿಯಲ್ಲಿಯೂ ನೋವುಂಟಾಗಿಲ್ಲ ಮತ್ತು ಅವರ ಪ್ರತಿಷ್ಠೆಗೆ ಮತ್ತು ಘನೆತೆಗೆ ಧಕ್ಕೆಯುಂಟಾಗಿಲ್ಲ. ಜತೆಗೆ, ದೂರುದಾರರು ಸಿದ್ದರಾಮಯ್ಯ ಹೇಳಿಕೆಯಿಂದ ಯಾವುದೇ ರೀತಿಯಲ್ಲಿಯೂ ಬಾಧಿತರಾಗಿಲ್ಲ. ಆದ್ದರಿಂದ ಪ್ರಕರಣವನ್ನು ಮುಂದುವರೆಸಿದಲ್ಲಿ ಕಾನೂನ ಪ್ರಕ್ರಿಯೆಯ ದುರುಪಯೋಗವಾಗಲಿದೆ. ಸಿದ್ದರಾಮಯ್ಯ ಅವರ ಹೇಳಿಕೆ ಲಿಂಗಾಯತ ಸಮುದಾಯಕ್ಕೆ ಯಾವುದೇ ರೀತಿಯಲ್ಲಿಯೂ ಮಾನಹಾನಿಕರವಲ್ಲ. ಹೀಗಾಗಿ ಅರ್ಜಿ ವಿಚಾರಣೆಗೆ ಅರ್ಹವಿಲ್ಲ ಎಂದು ತಿಳಿಸಿರುವ ನ್ಯಾಯಾಧೀಶರು ದೂರನ್ನು ರದ್ದು ಪಡಿಸಿ ಆದೇಶ ಮಾಡಿದರು.