ಬೆಂಗಳೂರು: ಖ್ಯಾತ ವೈದ್ಯ ಡಾ.ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡುವಂತೆ ಎಕ್ಸ್ ಕಾರ್ಪ್ಗೆ (ಹಿಂದಿನ ಟ್ವಿಟರ್) ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಹಿಮಾಲಯ ವೆಲ್ನೆಸ್ ಕಂಪನಿ ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿರುವ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ ಪಿ ಕುಮಾರಸ್ವಾಮಿ ಅವರು ಈ ಆದೇಶ ನೀಡಿದ್ದಾರೆ. ಕಂಪನಿ ಮಂಡಿಸಿರುವ ವಾಸ್ತವಿಕ ಅಂಶಗಳು ಮತ್ತು ಹಲವು ನ್ಯಾಯಾಲಯಗಳು ನೀಡಿರುವ ತೀರ್ಪಿನ ಪ್ರಕಾರ, ಫಿಲಿಪ್ಸ್ ಅವರಿಗೆ ನೊಟೀಸ್ ಜಾರಿ ಮಾಡುವುದಕ್ಕೂ ಮುನ್ನ ಅವರ ವಿರುದ್ಧ ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಕೋರ್ಟ್ ತಿಳಿಸಿದೆ.
ಕಂಪನಿಯ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಫಿಲಿಪ್ಸ್ ಅವರನ್ನು ನಿರ್ಬಂಧಿಸಬೇಕು ಮತ್ತು ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು ಎಂದು ಎಕ್ಸ್ ಕಾರ್ಪ್ಗೆ ಆದೇಶಿಸಬೇಕು ಅಂತಾ ಕಂಪನಿಯು ಕೋರಿತ್ತು. ಇದನ್ನು ನ್ಯಾಯಾಲಯವು ಪುರಸ್ಕರಿಸಿದೆ.
ಇದನ್ನೂ ಓದಿ :ಅಪಘಾತದಲ್ಲಿ ಏರ್ಬ್ಯಾಗ್ ತೆರೆಯದೇ ವೈದ್ಯ ಸಾವು : ಆನಂದ್ ಮಹೀಂದ್ರಾ ಸೇರಿ 13 ಜನರ ಮೇಲೆ ಕೇಸ್ ದಾಖಲಿಸಿದ ವ್ಯಕ್ತಿ