ಬೆಂಗಳೂರು:ಪತಿಯ ಸುಪರ್ದಿಗೆ ಅಪ್ರಾಪ್ತ ಪುತ್ರಿಯನ್ನು ಒಪ್ಪಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆ ವೈದ್ಯೆಯೊಬ್ಬರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಡಿ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ಪ್ರಕರಣ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ಮಹಿಳಾ ವೈದ್ಯರೊಬ್ಬರು ಮುಚ್ಚಳಿಕೆ ನೀಡಿದ್ದಾರೆ.
ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 33 ವರ್ಷದ ಆರೋಪಿ ವೈದ್ಯೆ ವಿಚಾರಣೆಗೆ ಖುದ್ದು ಹಾಜರಾಗಿ, ತಮ್ಮ ತಪ್ಪಿಗೆ ಬೇಷರತ್ ಕ್ಷಮೆ ಕೋರಿ ಪ್ರಮಾಣ ಪತ್ರ ಸಲ್ಲಿಸಿದರು. ಜತೆಗೆ, ಭವಿಷ್ಯದಲ್ಲಿ ತಮ್ಮ ವಿರುದ್ಧ ನ್ಯಾಯಾಲಯವು ಯಾವುದೇ ಕ್ರಮ ತೆಗೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗದಂತೆ ನಡೆದುಕೊಳ್ಳಲಾಗುವುದು. ಆ ಮಾತನ್ನು ಸಾಬೀತುಪಡಿಸಲು ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಂಬಂಧಪಟ್ಟ ಮುಖ್ಯಸ್ಥರು, ಸಿವಿಲ್ ಸರ್ಜನ್ ಅಥವಾ ನಿರ್ದೇಶಕರ ಪೂರ್ವಾನುಮತಿ ಪಡೆದು ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಸಹ ಬರೆದುಕೊಟ್ಟರು.
ಆ ಮುಚ್ಚಳಿಕೆ ಮತ್ತು ಬೇಷರತ್ ಕಮ್ಷಾಪಣೆ ಪ್ರಮಾಣ ಪತ್ರವನ್ನು ಒಪ್ಪಿಕೊಂಡ ವಿಭಾಗೀಯ ಪೀಠ, ವೈದ್ಯೆ ಮೇಲಿನ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈ ಬಿಟ್ಟಿತು. ಅಲ್ಲದೇ ಸಮುದಾಯ ಸೇವೆ ಸಲ್ಲಿಸುವ ಸಂಬಂಧ ಆರೋಪಿ ವೈದ್ಯೆಯು ನಗರದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಮನವಿ ಮಾಡಿದರೆ, ಆ ಮನವಿಯನ್ನು ಆಸ್ಪತ್ರೆಯ ಮುಖ್ಯಸ್ಥರು ಪರಿಗಣಿಸಬೇಕು. ಆಕೆಯ ಮನವಿಯಂತೆ ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ನಿರ್ದೇಶಿಸಿದೆ.
ಹಾಗೆಯೇ, ಆರು ತಿಂಗಳು ಕಳೆದ ನಂತರ ಆರೋಪಿ ವೈದ್ಯೆ, ತನ್ನ ಮುಚ್ಚಳಿಕೆಯನ್ನು ಪಾಲನೆ ಮಾಡಿದ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು ?:ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆರೋಪಿ ವೈದ್ಯೆಯ ಪತಿಯಿಂದ ಬೇರ್ಪಟ್ಟು ಪ್ರತ್ಯೇಕ ವಾಸ ಮಾಡುತ್ತಿದ್ದಾರೆ. ದಂಪತಿಗೆ 8 ವರ್ಷದ ಪುತ್ರಿ ಇದ್ದಾರೆ. ವೈದ್ಯೆ ತನ್ನ ಸುಪರ್ದಿಯಲ್ಲಿ ಪುತ್ರಿಯನ್ನು ಇಟ್ಟುಕೊಂಡಿದ್ದರು. ಈ ನಡುವೆ ತಾತ್ಕಾಲಿಕವಾಗಿ ಮಗುವನ್ನು ತಂದೆಯ ಸುಪರ್ದಿಗೆ ನೀಡುವಂತೆ ವೈದ್ಯೆಗೆ ಹೈಕೋರ್ಟ್ 2023 ರ ಜುಲೈನಲ್ಲಿ ನಿರ್ದೇಶಿಸಿತ್ತು. ಈ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ವೈದ್ಯೆ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಇದೀಗ ಅರ್ಜಿಯನ್ನು ಇತ್ಯರ್ಥ ಪಡಿಸಿರುವ ನ್ಯಾಯಪೀಠ, ಸಮುದಾಯ ಸೇವೆ ಸಲ್ಲಿಸುವಂತೆ ನಿರ್ದೇಶನ ನೀಡಿ ಆದೇಶಿಸಿದೆ.
ಇದನ್ನೂಓದಿ:ಕೆವಿಜೆ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರ ಕೊಲೆ ಪ್ರಕರಣ: 6 ಮಂದಿ ದೋಷಿಗಳೆಂದು ಘೋಷಿಸಿದ ಹೈಕೋರ್ಟ್