ಬೆಂಗಳೂರು:ಶಾಲೆಯಿಂದ ಹೊರಗುಳಿದಿರುವ ಮತ್ತು ವಲಸೆ ಬಂದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ಶಿಕ್ಷಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶಗಳನ್ನು ಪಾಲಿಸದ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿರುವ ಹೈಕೋರ್ಟ್, ಇದೇ ವಿಚಾರವಾಗಿ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಈ ಸಮಸ್ಯೆ ಸರಿಪಡಿಸಲು ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಗೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಸರ್ಕಾರದ ಅನುಪಾಲನಾ ವರದಿ ಸಲ್ಲಿಸಿದರು. ವರದಿ ಪರಿಶೀಲಿಸಿದ ಪೀಠ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪಿಐಎಲ್ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ಯಾವೊಂದು ಆದೇಶವನ್ನು ಸರ್ಕಾರ ಸರಿಯಾಗಿ ಪಾಲಿಸಿಲ್ಲ. ಇದು ನಮಗೆ ಸಲ್ಲಿಸಿರುವ ಅನುಪಾಲನಾ ವರದಿಗಳು ಮತ್ತು ಪ್ರಮಾಣಪತ್ರಗಳಿಂದ ಸ್ಪಷ್ಟವಾಗಿ ಕಂಡುಬರುತ್ತಿದೆ. ಕೋರ್ಟ್ ಕಠಿಣ ಆದೇಶ ಹೊರಡಿಸುವ ಮೊದಲು ಸ್ವತಃ ಅಡ್ವೋಕೇಟ್ ಜನರಲ್ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ತಾಕೀತು ಮಾಡಿತು.