ಬೆಂಗಳೂರು :ಕೊಚಾಡಿಯನ್ ಚಲನಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ವಿರುದ್ಧದ ಫೋರ್ಜರಿ ಪ್ರಕರಣ ಸಂಬಂಧ 2024ರ ಜನವರಿ 6ರ ಒಳಗಾಗಿ ವಿಚಾರಣೆಗೆ ಹಾಜರಾಗಲು ಬೆಂಗಳೂರು ನ್ಯಾಯಾಲಯ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನಗರದ 1ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಪ್ರಕರಣವು ಐಪಿಸಿ 463ರ ಅಡಿ (ಫೋರ್ಜಿರಿ) ಆಗಿರುವುದರಿಂದ ಆರೋಪಿತರು ಖುದ್ದು ಹಾಜರಾಗಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಲತಾ ರಜನಿಕಾಂತ್ ಪರ ವಕೀಲರು, ಆರೋಪಿತರನ್ನು ಖುದ್ದು ಹಾಜರಿಯಿಂದ ವಿನಾಯತಿ ನೀಡಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆರೋಪ ಜಾಮೀನು ರಹಿತ ಆಗಿರುವುದರಿಂದ ಖುದ್ದು ಹಾಜರಾಗಬೇಕು ಎಂದು ಸೂಚನೆ ನೀಡಿತು.
ಪ್ರಕರಣದ ಹಿನ್ನೆಲೆ:ರಜನಿಕಾಂತ್ ಅವರ ಪುತ್ರಿ ತಮಿಳಿನ ಕೊಚಾಡಿಯನ್ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಚಿತ್ರದ ಸಂಬಂಧ ಮೆರ್ಸಸ್ ಅಂಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆರ್ಸಸ್ ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಲಿಮಿಟೆಡ್ ನಡುವೆ ಆರ್ಥಿಕ ವಹಿವಾಟು ನಡೆದಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಅವರು ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದ್ದರೂ ಮೆರ್ಸಸ್ ಅಂಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ. ಈ ವಿವಾದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಈ ಕುರಿತ ಸುದ್ದಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಅವರು ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು 2014ರ ಡಿ. 2ರಂದು ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ನೀಡಿತ್ತು. ಆದರೆ, 2015ರ ಫೆ. 13ರಂದು ವಿಚಾರಣೆಯನ್ನು ವಿಚಾರಣಾ ವ್ಯಾಪ್ತಿಗೆ ಕೋರ್ಟ್‌ಗೆ ವರ್ಗಾಯಿಸಿತ್ತು. ಈ ವೇಳೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಲತಾ ಅವರ ಅರ್ಜಿಯನ್ನು ಹೈಕೋರ್ಟ್ 2016ರಲ್ಲಿ ವಜಾಗೊಳಿಸಿತ್ತು.