ಬೆಂಗಳೂರು : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ತನಿಖೆಗೆ ಸಂಬಂಧಿಸಿದ ಕೇಸ್ ಡೈರಿಯನ್ನು ಆಗಸ್ಟ್ 2ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ಮತ್ತು ಆ ಕುರಿತ ತನಿಖೆ ರದ್ದುಪಡಿಸುವಂತೆ ಕೋರಿ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ನ್ಯಾಯಪೀಠ ವಿಚಾರಣೆಯನ್ನು ಪೂರ್ಣಗೊಳಿಸಿತು.
ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್, ಸಿಆರ್ಪಿಸಿ ಮತ್ತು ಸಿಬಿಐ ಕೈಪಿಡಿಯ ಪ್ರಕಾರ, ಕೇಸ್ ಡೈರಿಯನ್ನು ನ್ಯಾಯಾಲಯ ಸಮನ್ಸ್ ಮಾಡಲಾಗದು. ಆದರೆ, ನ್ಯಾಯಾಲಯ ಬಯಸಿದಲ್ಲಿ ವಿಶೇಷ ಅಧಿಕಾರ ಬಳಸಿ ಅದನ್ನು ಸಮನ್ಸ್ ಮಾಡಬಹುದು. ಎಫ್‌ಐಆರ್ ಪ್ರಶ್ನಿಸಿರುವ ಸಂದರ್ಭದಲ್ಲಿ ಕೇಸ್ ಡೈರಿಯನ್ನು ನೋಡುವಂತಿಲ್ಲ. ಅದಾಗ್ಯೂ, ನ್ಯಾಯಾಲಯ ಬಯಸಿದಲ್ಲಿ ಅದನ್ನು ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಶಿವಕುಮಾರ್ ಪರ ಹಿರಿಯ ವಕೀಲ ಸಂದೇಶ್ ಚೌಟ, ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿಯ ಗಳಿಕೆ ಸಂಬಂಧಿಸಿದಂತೆ ಅಂಕಿ-ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ. ಹೀಗಾಗಿ, ಅದನ್ನು ತರಿಸಿಕೊಂಡು ನ್ಯಾಯಾಲಯ ಪರಿಶೀಲಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದನ್ನೂ ಓದಿ:ಪ್ರಕರಣವು ಕೋರ್ಟ್ ಮೆಟ್ಟಿಲೇರಿದ ದಿನದಿಂದ ಅಂತ್ಯಗೊಳ್ಳುವವರೆಗೂ ಬಡ್ಡಿ ಸೇರಿಸಿ ಪರಿಹಾರ ಕೊಡಬೇಕು: ಹೈಕೋರ್ಟ್
ಯಾವುದೇ ರೀತಿಯಲ್ಲಿಯೂ ತನಿಖೆ ವಿಳಂಬವಾಗಿಲ್ಲ: ವಾದ ಮುಂದುವರಿಸಿದ ಸಿಬಿಐ, ಚುನಾವಣಾ ಪ್ರಮಾಣ ಪತ್ರದಲ್ಲಿ 133 ಕೋಟಿ ರೂಪಾಯಿ ಆದಾಯ ಘೋಷಿಸಲಾಗಿದೆ. ಆದರೆ, ಈ ಪೈಕಿ 33 ಕೋಟಿ ರೂಪಾಯಿ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಈ ಸಂಬಂಧ ತನಿಖೆ ಮಾಡಲಾಗುತ್ತಿದೆ. 2022ರ ಮಾರ್ಚ್-ಜುಲೈ ಅವಧಿಯಲ್ಲಿ ವಿಭಿನ್ನ ದಿನಾಂಕಗಳಂದು ಕೋವಿಡ್ ಲಾಕ್ಡೌನ್ ಇದ್ದುದರಿಂದ ಎಲ್ಲವೂ ಸ್ತಬ್ಧವಾಗಿತ್ತು. ಅದನ್ನು ಹೊರತುಪಡಿಸಿ ಯಾವುದೇ ರೀತಿಯಲ್ಲಿಯೂ ತನಿಖೆ ವಿಳಂಬವಾಗಿಲ್ಲ ಎಂದು ವಾದ ಮಂಡಿಸಿದರು.
ಇದನ್ನೂ ಓದಿ:ಮೆಗಾಸಿಟಿ ಹಗರಣ: ಎಂಎಲ್‌ಸಿ ಸಿಪಿ ಯೋಗೇಶ್ವರ್ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ
ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು : ಸಾರ್ವಜನಿಕ ಸೇವಕ ಮತ್ತು ಅವರ ಪರವಾಗಿ ಎಂಬ ಮೂರು ಪದಗಳು ಎಫ್ಐಆರ್ನಲ್ಲಿ ಮಿಸ್ ಆಗಿವೆ ಎಂದಿದ್ದಾರೆ. ಎಫ್‌ಐಆರ್ ಅನ್ನು ಇನ್ನೂ ಚೆನ್ನಾಗಿ ಸಿದ್ಧಪಡಿಸಬಹುದಿತ್ತು ಎಂಬುದು ಎಫ್‌ಐಆರ್ ರದ್ದತಿಗೆ ಆಧಾರವಾಗುವುದಿಲ್ಲ. ಪ್ರಾಥಮಿಕ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದಿದೆ. ಪ್ರಾಥಮಿಕ ತನಿಖೆಯು ಮೂರು ತಿಂಗಳ ಕಾಲಾವಧಿ ಮೀರಿದರೆ ಸಿಬಿಐ ವಲಯ ಮುಖ್ಯಸ್ಥರ ಅನುಮತಿ ಪಡೆಯಬೇಕು ಎಂದಿದೆ. ಹಾಲಿ ಪ್ರಕರಣದಲ್ಲಿ ವಲಯದ ಮುಖ್ಯಸ್ಥರು ತನಿಖೆಯ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಹೇಳಿದರು. ಅಂತಿಮವಾಗಿ ಪೀಠವು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿ, ಆದೇಶ ಕಾಯ್ದಿರಿಸಿತು.
ಇದನ್ನೂ ಓದಿ:ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟ.. ಹೈಕೋರ್ಟ್ಗೆ ಕಾನೂನು ವಿದ್ಯಾರ್ಥಿಗಳಿಂದ ಪಿಐಎಲ್