ಬೆಂಗಳೂರು: ಟಿಪ್ಪು ಸುಲ್ತಾನ್ ಜೀವನ ಕುರಿತು ರಂಗಾಯಣ ನಿರ್ದೇಶಕ ಅಡ್ಡಾಂಡ ಕಾರ್ಯಪ್ಪ ಅವರು ರಚಿಸಿರುವ 'ಟಿಪ್ಪು ನಿಜ ಕನಸುಗಳು' ಕೃತಿ ಮಾರಾಟ ಮಾಡುವುದಕ್ಕೆ ನ್ಯಾಯಾಲಯ ನಿರ್ಬಂಧ ವಿಧಿಸಿ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ರಫಿವುಲ್ಲಾ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನಗರದ 14 ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್. ಮೆಂಡೋನ್ಕಾ ವಿಚಾರಣೆ ನಡೆಸಿದರು. ಈ ಕುರಿತ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯವರೆಗೂ ಪುಸ್ತಕವನ್ನು ಅಂಗಡಿಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿಯೂ ಮಾರಾಟ ಮಾಡದಂತೆ ಸೂಚಿಸಿದರು.
ಇದಕ್ಕೂ ಮುನ್ನ ನಡೆದ ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಪುಸ್ತಕದಲ್ಲಿ ಸಂಪೂರ್ಣ ತಪ್ಪು ಮಾಹಿತಿ ನೀಡಲಾಗಿದೆ. ಲೇಖಕರು ದಾಖಲಿಸಿರುವ ಅಂಶಗಳಿಗೆ ಯಾವುದೇ ಪುರಾವೆಗಳಿಲ್ಲ. ತಾನು ಬರೆದಿರುವ ಅಂಶಗಳನ್ನು ಎಲ್ಲಿಂದ ಪಡೆದುಕೊಳ್ಳಲಾಗಿದೆ ಎಂಬುದಕ್ಕೆ ದಾಖಲೆಗಳನ್ನು ಒದಗಿಸಿಲ್ಲ. ಮುಸ್ಲಿಮರ ಆಜಾನನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದ್ದು, ತುರುಕರು ಎಂಬ ಪದವನ್ನು ಬಳಕೆ ಮಾಡಿದ್ದಾರೆ. ಈ ಪುಸ್ತಕ ಜನರಿಗೆ ತಲುಪಿದಲ್ಲಿ ಸಮಾಜದಲ್ಲಿ ಅಶಾಂತಿ ಉಂಟಾಗಲು ಕಾರಣವಾಗಲಿದೆ. ಈ ನಿಟ್ಟಿನಲ್ಲಿ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.