ಬೆಂಗಳೂರು:ಹಣ ದೋಚುವ ಉದ್ದೇಶದಿಂದ ಹುಡುಗಿ ಆಸೆ ತೋರಿಸಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ ಅಪರಾಧಿಗಳಿಗೆ ನಗರದ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ದೆಹಲಿ ಮೂಲದ 29 ವರ್ಷದ ಸಿದ್ದಾರ್ಥ್ ದಾಸ್ ಎಂಬುವವರನ್ನು ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ 57ನೇ ಸಿಸಿಹೆಚ್ ನ್ಯಾಯಾಧೀಶ ಕೆ, ಜಿ ಚಿಂತಾ ಅವರು ಬೆಂಗಳೂರಿನ ಕಾಮಾಕ್ಷಿಪಾಳ್ಯದ ವಿನೋದ್ ಹಾಗೂ ಹೊಂಗಸಂದ್ರದ ರಾಘವೇಂದ್ರಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಅಪರಾಧಿಗಳಿಗೆ ವಿಧಿಸಿರುವ ದಂಡದ ಮೊತ್ತ 1 ಲಕ್ಷ ರೂಪಾಯಿಯನ್ನು ಮೃತ ಸಿದ್ದಾರ್ಥ್ ನ ತಂದೆ ಸುಧಾಮ ದಾಸ್ ಅವರಿಗೆ ನೀಡುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನಲೆ
ನ್ಯೂಡೆಲ್ಲಿಯ ಲೈಟ್ ಕ್ರಾಫ್ಟ್ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಿದ್ದಾರ್ಥ್ ದಾಸ್ ಕಂಪನಿ ಸೂಚನೆ ಮೇರೆಗೆ ಮಂತ್ರಿಮಾಲ್ ಗೆ ಸಂಬಂಧಿಸಿದ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಕರಾವಳಿ ಲಾಡ್ಜ್ ನಲ್ಲಿ ಸಹೋದ್ಯೋಗಿ ಜತೆ ರೂಮ್ ಮಾಡಿಕೊಂಡಿದ್ದರು. 2010ರ ಮಾರ್ಚ್ 26ರಂದು ಸಂಜೆ ಸಿದ್ದಾರ್ಥ್ ದಾಸ್ ಹಾಗೂ ಸ್ನೇಹಿತ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯ ಅಭಿನಯ ಟಾಕೀಸ್ ಮುಂದೆ ನಿಂತಿದ್ದಾಗ ಆರೋಪಿಗಳು ತಮ್ಮ ಪರಿಚಯ ಮಾಡಿಕೊಂಡು ವೇಶ್ಯಾವಾಟಿಕೆಗೆ ಹುಡುಗಿ ಕೊಡಿಸುವುದಾಗಿ ಆಸೆ ತೋರಿಸಿ ಕರೆದೊಯ್ದಿದ್ದರು.
ನಗರದ ಪ್ಯಾಲೇಸ್ ಗ್ರೌಂಡ್ ಬಳಿ ಸಿದ್ದಾರ್ಥ್ ಹಾಗೂ ಸೇಹಿತನನ್ನು ಪ್ರತ್ಯೇಕಿಸಿದ್ದರು. ಬಳಿಕ ಸಿದ್ದಾರ್ಥನನ್ನು ಪ್ಯಾಲೇಸ್ ಗ್ರೌಂಡ್ ಒಳಗೆ ಕರೆದೊಯ್ದು ಹಲ್ಲೆ ಮಾಡಿದ್ದ ವಿನೋದ್ ಹಾಗೂ ರಾಘವೇಂದ್ರ ಆತನ ಬಳಿಯಿದ್ದ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಕಿತ್ತುಕೊಂಡಿದ್ದರು. ನಂತರ ಸಿದ್ದಾರ್ಥ್ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದ ಪಾಪಿಗಳು, ಮೃತದೇಹದ ಮೇಲೆ ಪೆಟ್ರೋಲ್ ಹಾಗೂ ಸೌದೆಗಳನ್ನು ಹಾಕಿ ಸುಟ್ಟು ಹಾಕಿದ್ದರು.
ಆ ಬಳಿಕ ಸಿದ್ದಾರ್ಥ್ ಎಟಿಎಂ ಕಾರ್ಡ್ ಬಳಸಿ 73 ಸಾವಿರ ಹಣ ಡ್ರಾ ಮಾಡಿಕೊಂಡಿದ್ದರು. ಕೊಲೆ ಪ್ರಕರಣದ ಸಂಬಂಧ ಶೇಷಾದ್ರಿಪುರ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕಿ ಕೆ.ಎಸ್ ವೀಣಾ ವಾದ ಮಂಡಿಸಿದ್ದರು.
ಓದಿ:ಡಿಸೆಂಬರ್ 31ರಂದು ಕರ್ನಾಟಕ ಬಂದ್ಗೆ ಚಿತ್ರೋದ್ಯಮದಿಂದ ನೈತಿಕ ಬೆಂಬಲ.. ಫಿಲ್ಮ್ ಚೇಂಬರ್ ಸ್ಪಷ್ಟನೆ