ಬೆಂಗಳೂರು: ಸಿಎಎ ವಿರೋಧಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಜೈಲು ಸೇರಿರುವ ಅಮೂಲ್ಯ ಲಿಯೋನ್ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಜಾಮೀನು ನೀಡುವಂತೆ ಕೋರಿ ಅಮೂಲ್ಯ ಸಲ್ಲಿಸಿದ್ದ ಅರ್ಜಿಯನ್ನು ನಗರದ 60 ನೇ ಹೆಚ್ಚುವರಿ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ವಿಚಾರಣೆ ನಡೆಸಿ, ಜಾಮೀನು ಅರ್ಜಿ ವಜಾ ಮಾಡಿದ್ದಾರೆ. ಆರೋಪಿ ವಿರುದ್ಧ ದೇಶದ್ರೋಹ ಮತ್ತು ಸಾಮಾಜಿಕ ಶಾಂತಿ ಕದಡಿದ ಆರೋಪವಿದ್ದು, ಈ ಕುರಿತು ಪೊಲೀಸರು ಈವರೆಗೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಒಂದು ವೇಳೆ ಜಾಮೀನು ನೀಡಿದರೆ ಹಿಂದಿನಂತೆಯೇ ಆರೋಪಿ ಮತ್ತೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಹುದು ಅಥವಾ ತಲೆಮರೆಸಿಕೊಳ್ಳಬಹುದು. ಹೀಗಾಗಿ ಜಾಮೀನು ನೀಡುವುದು ಸೂಕ್ತ ಕ್ರಮವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಮೂಲ್ಯ ಪರ ವಾದ ಮಂಡಿಸಿದ್ದ ವಕೀಲರಾದ ಬಿ.ಟಿ. ವೆಂಕಟೇಶ್, ಅರ್ಜಿದಾರಳಾದ ಅಮೂಲ್ಯ ಇನ್ನೂ 19 ವರ್ಷ ವಯಸ್ಸಿನ ಯುವತಿ. ನಗರದ ಖಾಸಗಿ ಕಾಲೇಜ್ ಒಂದರಲ್ಲಿ ಬಿಎ ಪತ್ರಿಕೋದ್ಯಮ ಓದುತ್ತಿದ್ದಾರೆ. ಅವರು ಪಾಕಿಸ್ತಾನ ಜಿಂದಾಬಾದ್ ಎಂದಷ್ಟೇ ಕೂಗಿದ್ದಾರೆ. ಪಾಕಿಸ್ತಾನವನ್ನು ನಮ್ಮ ದೇಶ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಮತ್ತು ಘೋಷಣೆ ಮಾಡಿಲ್ಲ. ಹಾಗಿದ್ದ ಮೇಲೆ ಪೊಲೀಸರು ಆರೋಪಿಸಿರುವಂತೆ ಇದು ದೇಶದ್ರೋಹದ ಕೃತ್ಯವಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ:
ಫೆ.20 ರಂದು ಕೆಲ ಸಂಘಟನೆಗಳು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಮೂಲ್ಯ ಲಿಯೋನ್ ಅಲ್ಲಿಗೆ ತೆರಳಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ವಿರುದ್ಧ ಐಪಿಸಿ ಸೆಕ್ಷನ್ 124 (ಎ), 153(ಎ)(ಬಿ), 505 (2) ಅಡಿ ದೇಶದ್ರೋಹ, ಸಾಮಾಜಿಕ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅಂದಿನಿಂದ ಈವರೆಗೂ ಜೈಲಿನಲ್ಲಿರುವ ಅಮೂಲ್ಯ ಜಾಮೀನಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದಾಳೆ.