ಬೆಂಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿ, ದೂರದರ್ಶನ ಕೇಂದ್ರದಲ್ಲಿ ನಡೆಯುತ್ತಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ದೂರದರ್ಶನ ಕಾರ್ಯಕ್ರಮದ ಉಪ ನಿರ್ದೇಶಕ ಎನ್.ಕೆ.ಮೋಹನ ರಾಮ್ ಹಾಗೂ ಪ್ರೊಡಕ್ಷನ್ ಸಹಾಯಕ ಎಸ್.ಬಿ.ಭಜಂತ್ರಿ ವಿರುದ್ಧ ದೂರದರ್ಶನ ಕೇಂದ್ರದ ಅಂದಿನ ಹಿರಿಯ ನಿರ್ದೇಶಕ ಮಹೇಶ್ ಜೋಶಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ನಗರದ ಎಸಿಎಂಎಂ(ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್) ನ್ಯಾಯಾಲಯ ರದ್ದುಪಡಿಸಿದೆ. ಜೋಶಿ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್, ಪ್ರಕರಣದ ಆರೋಪಿಗಳಾಗಿದ್ದ ಎನ್.ಕೆ.ಮೋಹನ ರಾಮ್ ಮತ್ತು ಎಸ್.ಬಿ.ಭಜಂತ್ರಿ ಅವರನ್ನು ದೋಷಮುಕ್ತಗೊಳಿಸಿ ಆದೇಶಿಸಿದರು. ಆರೋಪಿಗಳ ವಿರುದ್ಧದ ಆಪಾದನೆಗಳನ್ನು ಪುಷ್ಟೀಕರಿಸುವ ಮತ್ತು ಸೂಕ್ತ ಸಾಕ್ಷ್ಯಗಳನ್ನು ಹಾಜರುಪಡಿಸುವಲ್ಲಿ ದೂರುದಾರರು ವಿಫಲವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದೊಂದು ಪರಸ್ಪರರ ವೃತ್ತಿಪರ ವೈಮನಸ್ಸು ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿ ಮಹೇಶ್ ಜೋಶಿ ದೂರು ದಾಖಲಿಸಿದಂತಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಟ್ಟಿದ್ದಾರೆ. ಆರೋಪಿಗಳ ವಿರುದ್ಧ ದೂರಿನಲ್ಲಿ ನಿಗದಿಪಡಿಸಲಾಗಿದ್ದ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಸರ್ಕಾರಿ ನೌಕರನ ಕಾರ್ಯನಿರ್ವಹಣೆಗೆ ಅಡ್ಡಿ, ಶಾಂತಿ ಭಂಗ ಹಾಗೂ ಉದ್ದೇಶಪೂರ್ವಕ ಅಪಮಾನ, ಅಪರಾಧಿಕ ಒಳಸಂಚು ಮತ್ತು ರಾಷ್ಟ್ರೀಯ ಗೌರವಕ್ಕೆ ಅಪಮಾನ ಆರೋಪಗಳನ್ನು ರದ್ದುಪಡಿಸಲಾಗಿದೆ.