ಬೆಂಗಳೂರು : ಕೆಎಸ್ಆರ್ಟಿಸಿ ನಿಗಮ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ ಪ್ರಕರಣದ ಆರೋಪಿ ಯುವರಾಜ್ ಸ್ವಾಮಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.
ಹಣ ಪಡೆದು ವಂಚನೆ: ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್ - ಬೆಂಗಳೂರು ವಂಚನೆ ಪ್ರಕರಣ
17:59 February 08
67ನೇ ಸೆಷನ್ಸ್ ಕೋರ್ಟ್ನಿಂದ ಜಾಮೀನು ಅರ್ಜಿ ವಜಾ
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿ ಯುವರಾಜ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 67ನೇ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ಕಾತ್ಯಾಯಿನಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದರು. ಆರೋಪಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಲಾಗಿದೆ. ಸಿಸಿಬಿ ಪರ ಸರ್ಕಾರಿ ಅಭಿಯೋಜಕ ಬಿ.ಎಸ್ ಪಾಟೀಲ್ ವಾದ ಮಂಡಿಸಿದ್ದರು.
ಬಿಜೆಪಿ ನಾಯಕರೊಂದಿಗೆ ತನಗೆ ನಿಕಟ ಸಂಪರ್ಕವಿದ್ದು, ನಿಮಗೆ ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿ ಸುರೇಂದ್ರ ರೆಡ್ಡಿ ಎಂಬವರಿಂದ ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದು ವಂಚಿಸಿದ್ದ ಆರೋಪದಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದು ಆರೋಪಿ ಯುವರಾಜ್ ವಿರುದ್ಧ ದಾಖಲಿಸಿಕೊಂಡಿರುವ ಮೊದಲ ಪ್ರಕರಣವಾಗಿದ್ದು, ನ್ಯಾಯಾಲಯ ಜಾಮೀನು ನಿರಾಕರಿಸಿರುವುದು ಗಮನಾರ್ಹ.
ಓದಿ : ಶೀಘ್ರ ಸಬ್ ಕಮಿಟಿ ವರದಿ ಸಲ್ಲಿಕೆ: ಮೀಸಲು ಘೋಷಣೆ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದ ಶ್ರೀರಾಮುಲು
ಆರೋಪಿ ಸ್ವಾಮಿ ರಾಜ್ಯಪಾಲರ ಹುದ್ದೆ, ಸರ್ಕಾರಿ ನೌಕರಿ, ಮೆಡಿಕಲ್ ಸೀಟ್, ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಸಿಸಿಬಿ ಪೊಲೀಸರು ಆರೋಪಿಸಿದ್ದಾರೆ. ಹಾಗೆಯೇ, ಈತನ ವಿರುದ್ಧ ಹೈಗ್ರೌಂಡ್ಸ್, ಸದಾಶಿವನಗರ, ಉಪ್ಪಾರಪೇಟೆ, ವಿಲ್ಸನ್ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.