ಬೆಂಗಳೂರು:ಕೋವಿಡ್ಗೆ ಚಿಕಿತ್ಸೆ ನೀಡಲು ನಿರ್ದಿಷ್ಟ ಔಷಧಿಯೊಂದು ಉತ್ತಮವಾಗಿದ್ದು, ಅದರ ಮೇಲೆ ಹೆಚ್ಚಿನ ಸಂಶೋಧನೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಔಷಧಿ ಸಂಶೋಧನೆ ವಿಚಾರವು ಪರಿಣಿತರು, ತಜ್ಞರು ನಿರ್ಧರಿಸಬಹುದಾದ ವಿಚಾರವಾಗಿದ್ದು, ಈ ಕುರಿತು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅರ್ಜಿ ವಜಾಗೊಳಿಸುವ ವೇಳೆ ಅಭಿಪ್ರಾಯಪಟ್ಟಿದೆ.
ನಿರ್ದಿಷ್ಟ ಔಷಧಿಯೊಂದನ್ನು ಕೋವಿಡ್ ಸೋಂಕು ನಿವಾರಣೆಗೆ ಬಳಸಬಹುದಾಗಿದೆ. ಹೀಗಾಗಿ ಔಷಧಿಯನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸಂಶೋಧನೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೊಲಾದಿಯ ಕಿರೀಟ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರು ತಾವು ಫ್ರೀಲ್ಯಾನ್ಸ್ ಮೆಡಿಕಲ್ ರೀಸರ್ಚರ್ ಆಗಿದ್ದು, ತಾವು ಸಾಕಷ್ಟು ಸಂಶೋಧನೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಅವರು ತಮ್ಮ ಸಾಧನೆ ಕುರಿತ ಯಾವುದೇ ವಿಚಾರವನ್ನೂ ಅರ್ಜಿಯಲ್ಲಿ ನಮೂದಿಸಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದೆ.
ಇನ್ನು ಕೋವಿಡ್ ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು. ಯಾವ ಔಷಧಿ ನೀಡಬೇಕು ಎಂಬುದನ್ನು ತಜ್ಞರು ನಿರ್ಧರಿಸಬೇಕು. ಇಂತಹ ವಿಚಾರಗಳನ್ನು ಕೋರ್ಟ್ ವ್ಯಾಪ್ತಿಯಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಅದರಂತೆ ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.
ಕಳೆದ ಸೋಮವಾರವಷ್ಟೇ ಇಂತಹುದೇ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ವಜಾ ಮಾಡಿ ಆದೇಶಿಸಿತ್ತು. ಕೋವಿಡ್ ಸೋಂಕು ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ನೀಡುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ನೀಡುವ ಎರಡು ಡೋಸ್ಗಳ ನಡುವಿನ ಅವಧಿಯನ್ನು ಕಡಿಮೆ ಮಾಡುವ ಕುರಿತಂತೆ ಸಲ್ಲಿಸಿದ್ದ ಅರ್ಜಿಯನ್ನು ಅಲ್ಲಿನ ಕೋರ್ಟ್ ವಜಾಗೊಳಿಸಿತ್ತು.
ತಾಂತ್ರಿಕ ವಿಷಯಗಳನ್ನು ನ್ಯಾಯಾಲಯ ಪರಿಶೀಲಿಸುವಷ್ಟು ಪರಿಣತಿ ಹೊಂದಿಲ್ಲ. ಕೋವಿಡ್ ಪ್ರತಿನಿತ್ಯ ರೂಪಾಂತರ ಹೊಂದುತ್ತಿರುವ ಕುರಿತು ತಜ್ಞರು ಹೇಳುತ್ತಿದ್ದಾರೆ. ಇಂತಹ ವಿಚಾರಗಳನ್ನು ವಿಶ್ಲೇಷಿಸುವಷ್ಟು ಪರಿಣತಿಯನ್ನು ನ್ಯಾಯಾಲಯಗಳು ಹೊಂದಿಲ್ಲ ಎಂದು ಕಲ್ಕತ್ತಾ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತ್ತು.