ಬೆಂಗಳೂರು:ಕೊರೊನಾದಿಂದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬದುಕಿಗೆ ಪೆಟ್ಟು ಬಿದ್ದಿದೆ. ಸಾಂಕ್ರಾಮಿಕ ರೋಗಕ್ಕೆ ಅದೆಷ್ಟೋ ಸಾವು ಸಂಭವಿಸಿವೆ, ಮದುವೆಗಳೂ ಮುಂದೂಡಿಕೆ ಆಗಿದ್ದವು. ಆದರೆ, ವೈರಸ್ ಆತಂಕದಿಂದ ದಂಪತಿಗಳು ಸದ್ಯಕ್ಕೆ ಮಗು ಸ್ವೀಕರಿಸಲು ಹಿದೇಟು ಹಾಕುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ರಾಧಾಕೃಷ್ಣ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆಯ ವೈದ್ಯರಾಗಿರುವ ಡಾ ವಿದ್ಯಾ ಭಟ್ ಈ ವಿಚಾರ ಹೊರಹಾಕಿದ್ದಾರೆ. ಕೋವಿಡ್ ಸಮಯದಲ್ಲಿ ಅದೆಷ್ಟೋ ಜೋಡಿಗಳು ಮದುವೆ ಆಗುವುದನ್ನ ಮುಂದೂಡಿದರು. ಹಾಗೆಯೇ ಮೊದಲ ಮಗು ಪಡೆಯಲು ಮತ್ತು ಎರಡನೇ ಮಗು ಬೇಕು ಅಂತ ಇದ್ದವರು ಗರ್ಭಪಾತ ಮಾಡಿಸಿದ್ದಾರೆ ಅಂತ ತಿಳಿಸಿದರು.
ಇದಕ್ಕೆ ಪ್ರಮುಖ ಕಾರಣ ಗರ್ಭಧರಿಸಿದರೆ, ಪ್ರತಿ ತಿಂಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಿರುಗಾಡಬೇಕು. ಎಲ್ಲಿ ಮಗುವಿಗೂ ಸೋಂಕು ತಗುಲುವ ಭಯ. ತಾಯಿ-ಮಗು ಇಬ್ಬರಿಗೂ ಬೇರೆ-ಬೇರೆ ಅನಾರೋಗ್ಯ ಸಮಸ್ಯೆ ಕಾಡುವುದು ಎಂಬ ಆತಂಕದಿಂದ ಮಗು ಬೇಡ ಅಂತ ಮುಂದೂಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಶೇ 20ರಷ್ಟು ಸಾವು ಹೆರಿಗೆ ಸಮಯದಲ್ಲಿ ಆಗುತ್ತಿದೆಯಂತೆ. ಹೆರಿಗೆ ವೇಳೆ ಕಾಡುವ ರಕ್ತಹೀನತೆ, ಡಯಾಬಿಟಿಸ್, ಒಬೆಸಿಟಿ, ಬಿಪಿ ಜಾಸ್ತಿಯಾಗಿ ಪಿಡ್ಸ್ ಬಂದು ಸಾಯುವ ಸಾಧ್ಯತೆಯೂ ಇವೆ. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನ ಏಪ್ರಿಲ್ 11ರಂದು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ತಾಯಂದಿರ ಸಾವಿನ ಬಗ್ಗೆ ಡಾ. ವಿದ್ಯಾ ಭಟ್ ವಿವರಿಸಿದರು.
ವೈದ್ಯಕೀಯ ವ್ಯವಸ್ಥೆ ಇದ್ದರೂ ಸಹ ಇಂದಿಗೂ ಹಲವು ಗ್ರಾಮಾಂತರ ಭಾಗದಲ್ಲಿ ಮನೆಯಲ್ಲೇ ಹೆರಿಗೆ ಮಾಡಿಸುವುದು, ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಬರುವುದರಿಂದ ಗರ್ಭಿಣಿಯರು ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಮನೆ- ಮನೆಗೆ ತೆರಳಿ ವೈದ್ಯಕೀಯ ಸೌಲಭ್ಯದ ಬಗ್ಗೆ ತಿಳಿ ಹೇಳುತ್ತಾ ಬಂದಿದ್ದರು. ಇನ್ನೂ ಹಲವು ಕಡೆ ಮನೆಯಲ್ಲೇ ಪ್ರಸವ ಮಾಡೋದು ನಿಂತಿಲ್ಲ. ಇದು ಸಂಪೂರ್ಣವಾಗಿ ನಿಲ್ಲಬೇಕು. ಅದಷ್ಟು ಮಹಿಳೆಯರು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.