ಕರ್ನಾಟಕ

karnataka

ETV Bharat / state

ಬೆಂಗಳೂರು: ಗೃಹಪ್ರವೇಶ ಮುಗಿಸಿ ಬರುತ್ತಿದ್ದಾಗ ಕ್ಯಾಂಟರ್ ಡಿಕ್ಕಿ, ದಂಪತಿ ಸ್ಥಳದಲ್ಲೇ ಸಾವು

Couple killed in Bengaluru road accident: ಕ್ಯಾಂಟರ್ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.

Bengaluru accident
ಬೆಂಗಳೂರು ಅಪಘಾತ

By ETV Bharat Karnataka Team

Published : Dec 1, 2023, 7:05 AM IST

ಬೆಂಗಳೂರು: ನೈಸ್‌ ರಸ್ತೆಯ ವಜ್ರಮುನೇಶ್ವರ ಕೆಳಸೇತುವೆಯ ಬಳಿ ಕ್ಯಾಂಟರ್‌ ವಾಹನವೊಂದು ಹಿಂದಿನಿಂದ ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಾಹ್ನ ನಡೆಯಿತು. ವಿಜಯನಗರದ ಹೊಸಹಳ್ಳಿ ನಿವಾಸಿಗಳಾದ ಬೈಯಣ್ಣ(55) ಮತ್ತು ನಿರ್ಮಲ (44) ಮೃತರು. ಗುರುವಾರ ಬೆಳಿಗ್ಗೆ ಇವರು ಹಾರಗದ್ದೆಗೆ ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವಾಪಸ್‌ ಬರುವಾಗ ಮಾರ್ಗಮಧ್ಯೆ ದುರ್ಘಟನೆ ನಡೆದಿದೆ.

ಬೈಯಣ್ಣ ಮತ್ತು ನಿರ್ಮಲ ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನದಲ್ಲಿ ನೈಸ್‌ ರಸ್ತೆಯ ಮುಖಾಂತರ ಮನೆ ಕಡೆಗೆ ಹೊರಟಿದ್ದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ವಜ್ರಮುನೇಶ್ವರ ಕೆಳಸೇತುವೆ ಸಮೀಪ ಹೋಗುತ್ತಿದ್ದಾಗ ಹಿಂದಿನಿಂದ ಕ್ಯಾಂಟರ್‌ ವಾಹನ ವೇಗವಾಗಿ ಬಂದು ಗುದ್ದಿದೆ. ಇದರ ರಭಸಕ್ಕೆ ದಂಪತಿ ದ್ವಿಚಕ್ರ ವಾಹನಸಹಿತ ಹಾರಿ ರಸ್ತೆಗೆ ಬಿದ್ದಿದ್ದಾರೆ. ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್‌ ವಾಹನ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆಯ ಹಿನ್ನೆಲೆಯಲ್ಲಿ ತಲಘಟ್ಟಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಕ್ಯಾಂಟರ್‌ ಚಾಲಕನ ಅತಿಯಾದ ವೇಗದ ಚಾಲನೆ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್‌ ಚಾಲಕನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

3ನೇ ಅಪಘಾತದಲ್ಲಿ ಸಾವು!:ಬೈಯಣ್ಣ-ನಿರ್ಮಲ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ಇಂಜಿನಿಯರಿಂಗ್ ಪದವೀಧರರು. ಬೈಯಣ್ಣ ಹೊಸಹಳ್ಳಿಯ ದೇವಸ್ಥಾನವೊಂದರ ಟ್ರಸ್ಟಿಯಾಗಿದ್ದರು. ಈ ಹಿಂದೆ ಎರಡು ಬಾರಿ ಅಪಘಾತಕ್ಕೆ ಒಳಗಾಗಿದ್ದ ಇವರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಸಂಭವಿಸಿದ ಮೂರನೇ ಬಾರಿ ಅಪಘಾತದಲ್ಲಿ ಬೈಯಣ್ಣ ಹಾಗೂ ಪತ್ನಿ ಇಬ್ಬರೂ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ; ಕ್ಷುಲ್ಲಕ ಕಾರಣಕ್ಕೆ ಅಜ್ಜನನ್ನು ಕೊಂದ ಮೊಮ್ಮಗ: ಬಸ್-ಬೈಕ್ ಅಪಘಾತದಲ್ಲಿ ಇಬ್ಬರು ಸಾವು

ABOUT THE AUTHOR

...view details