ಬೆಂಗಳೂರು:ನಮಗೆ ಸಂಪುಟ ರಚನೆ ಅಥವಾ ಪಕ್ಷದ ನಾಯಕರನ್ನು ಅಧಿಕಾರದಲ್ಲಿ ಕೂರಿಸುವುದು ಮುಖ್ಯವಲ್ಲ. ದೇಶವನ್ನು ಸದೃಢಗೊಳಿಸುವುದು, ದೇಶವನ್ನು ಅಖಂಡಗೊಳಿಸುವುದಕ್ಕೆ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಮೋದಿ, ಅಮಿತ್ ಶಾ ತೊಡಗಿಕೊಂಡ ಕಾರಣ ರಾಜ್ಯ ಸಚಿವ ಸಂಪುಟ ರಚನೆ ಸ್ವಲ್ಪ ವಿಳಂಬವಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
370 ವಿಧಿ ರದ್ದುಪಡಿಸುವ ಜೊತೆಗೆ 35ಎ ವಿಧಿ ಕೂಡಾ ರದ್ದಾಗಿದೆ. ಈ ವಿಚಾರದಲ್ಲಿ ನಮ್ಮ ರಾಷ್ಟ್ರ ನಾಯಕರು ಬಿಡುವಿಲ್ಲದೇ ತೊಡಗಿಕೊಂಡ ಕಾರಣ ರಾಜ್ಯದ ಸಂಪುಟ ರಚನೆಗೆ ಕಾಯಬೇಕಾಗಿದೆ ಎಂದರು.
ಸಂಪುಟ ರಚನೆ ಸಂಬಂಧ ವಿರೋಧ ಪಕ್ಷದವರು ನಮ್ಮನ್ನು ಟೀಕಿಸುತ್ತಿದ್ದಾರೆ. ಆದರೆ, ಸಂಪುಟ ರಚನೆ ಆಗದೇ ಇದ್ದರೂ ಕೂಡ 34 ಜನರ ಕೆಲಸವನ್ನು ಯಡಿಯೂರಪ್ಪ ಒಬ್ಬರೇ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಳೆದ ಆರು ವರ್ಷದ ರಾಜಕೀಯದಿಂದ ಜನರು ಬೇಸತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಆಡಳಿತದಿಂದ ಜನ ರೋಸಿ ಹೋಗಿದ್ದರು. ಆ ಎಲ್ಲವನ್ನು ಮರೆಸಿ ಉತ್ತಮ ಆಡಳಿತ ನೀಡುವ ಕೆಲಸವನ್ನು ಯಡಿಯೂರಪ್ಪ ಮಾಡಲಿದ್ದಾರೆ. ಅದಕ್ಕಾಗಿ ನವೆಂಬರ್, ಡಿಸೆಂಬರ್ವರೆಗೂ ಸ್ವಲ್ಪ ಸಮಯ ನೀಡಿ ಎಂದರು.