ಬೆಂಗಳೂರು :ಭಾರತ ಜಗತ್ತಿನ ಪ್ರಮುಖ ಔಷಧ ರಫ್ತುದಾರ ರಾಷ್ಟ್ರವಾಗಿದ್ದರೂ, ನಾವಿನ್ನೂ ಕೆಲವು ಮೂಲ ಔಷಧ ರಾಸಾಯನಿಕಗಳಿಗಾಗಿ ಚೀನಾ ಮತ್ತಿತರ ದೇಶಗಳನ್ನೇ ಅವಲಂಬಿಸಿದ್ದೇವೆ. ಇವನ್ನು ಕೂಡಾ ಸಂಪೂರ್ಣ ಸ್ವದೇಶಿಯಾಗಿ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಕೊರೊನಾ ಆರಂಭಕ್ಕೆ ಮುನ್ನ ಭಾರತದಲ್ಲಿ ಪಿಪಿಇ ಕಿಟ್, ವೆಂಟಿಲೇಟರ್ಗಳು ತಯಾರಾಗುತ್ತಿರಲಿಲ್ಲ. ಆದರೆ, ಇಂದು ಪ್ರತಿನಿತ್ಯ 4 ಲಕ್ಷ ಪಿಪಿಇ ಕಿಟ್ ತಯಾರಿಸುತ್ತಿದ್ದೇವೆ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ಗಳ ಉತ್ಪಾದನೆ ಆರಂಭಗೊಂಡಿದೆ. ವೈದ್ಯಕೀಯ ಉಪಕರಣಗಳ ಸ್ವಾವಲಂಬನೆಗೂ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ನಾವು ಜಗತ್ತಿನ 120 ದೇಶಗಳಿಗೆ ಜೀವರಕ್ಷಕ ಔಷಧಗಳನ್ನು ಕಳುಹಿಸಿಕೊಟ್ಟಿದ್ದೇವೆ. ಭಾರತದ ಈ ನೆರವನ್ನು ಇಡೀ ವಿಶ್ವವೇ ಕೊಂಡಾಡಿದೆ. ನಾನು ನಿರ್ವಹಿಸುವ ರಾಸಾಯನಿಕ ಇಲಾಖೆ (ಔಷಧೋದ್ಯಮ ಸೇರಿದಂತೆ) ಅಂದಾಜು 14,300 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೂರು ಕಡೆ ಬಲ್ಕ್ ಡ್ರಗ್ ಪಾರ್ಕ್ ಹಾಗೂ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕ್ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.