ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಎರಡನೇ ಆರ್ಥಿಕ ಮುಂಗಡ ಬಜೆಟ್ ಮಂಡನೆಗೆ ಸಿದ್ದರಾಗಿದ್ದಾರೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಆಯವ್ಯಯದಲ್ಲಿ ಹೊಸ ಯೋಜನೆಗಳು, ಹೆಚ್ಚಿನ ಅನುದಾನ ಸೇರಿದಂತೆ ಆಡಳಿತ ಪಕ್ಷದ ಶಾಸಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಇದೀಗ ಎಲ್ಲರ ಚಿತ್ತ ಬೊಮ್ಮಾಯಿ ಜೋಳಿಗೆಯತ್ತ ನೆಟ್ಟಿದೆ.
ಫೆ.17ರಂದು ಬಿಜೆಪಿ ಸರ್ಕಾರದ ಕೊನೆಯ ಮತ್ತು ಬೊಮ್ಮಾಯಿ ಸರ್ಕಾರದ ಎರಡನೇ ಬಜೆಟ್ ಮಂಡನೆಯಾಗಲಿದೆ. ಈಗಾಗಲೇ ಬಜೆಟ್ ಸಿದ್ಧತೆಯನ್ನೂ ಸಿಎಂ ಮಾಡಿಕೊಂಡಿದ್ದಾರೆ. ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿದ್ದು, ಬಿಜೆಪಿ ಶಾಸಕರು,ಮುಖಂಡರ ಅಭಿಪ್ರಾಯ ಪರಿಗಣಿಸಿ ಬಜೆಟ್ ಸಿದ್ದತೆ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಪೂರಕವಾಗುವ ರೀತಿಯ ಯೋಜನೆಗಳು, ಘೋಷಣೆಗಳು, ಅನುದಾನಗಳ ಇರಲಿವೆ ಎನ್ನುವುದು ಬಿಜೆಪಿ ಶಾಸಕರ ನಿರೀಕ್ಷೆಯಾಗಿದೆ.
ನೀರಾವರಿಗೆ ಭರಪೂರ ಅನುದಾನ ಘೋಷಣೆ: ದಶಕಗಳಿಂದ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗುತ್ತಿದ್ದು, ರೈತಾಪಿ ಸಮುದಾಯವ ಮನಗೆಲ್ಲಲು ನೀರಾವರಿ ಯೋಜನೆಗಳಿಗೆ ಭರಪೂರ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಹೆಚ್ಚಿನ ಅನುದಾನ ಘೋಷಿಸುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಅನುದಾನ ಮಂಜೂರಾತಿ ಮೂಲಕ ಆ ಭಾಗದ ಜನರ ಸೆಳೆಯಲಾಗುತ್ತದೆ.
ಈ ಸಂಬಂಧ ಉತ್ತರ ಕರ್ನಾಟಕ ಭಾಗದ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿದ್ದು ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಮೈಸೂರು ಭಾಗದ ಅಭಿವೃದ್ಧಿಗೆ ಹೆಚ್ಚು ಅನುದಾನ:ಇನ್ನು ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗವನ್ನೂ ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಮಾಡಿದ್ದು, ಬಜೆಟ್ ನಲ್ಲಿಯೂ ಹಳೆ ಮೈಸೂರು ಭಾಗಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಮೈಸೂರು ಚಿಕ್ಕಮಗಳೂರು ಭಾಗದ ಪ್ರಮುಖ ಪ್ರವಾಸೀ ತಾಣಗಳನ್ನು ಒಳಗೊಂಡಂತೆ ಟೂರಿಸಂ ಸರ್ಕೀಟ್ಗೆ ಅನುದಾನ ನೀಡುವುದು, ವಿಶ್ವವಿಖ್ಯಾತ ದಸರಾ ಆಚರಣೆಗಾಗಿ ಪ್ರತ್ಯೇಕ ದಸರಾ ಪ್ರಾಧಿಕಾರ ರಚಿಸಿ ಅನುದಾನ ಬಿಡುಗಡೆ, ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಹಾಸನ ಜಿಲ್ಲೆಗೆ ವಿವಿಧ ಯೋಜನೆ ಘೋಷಣೆ: ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗೊರೂರಿನ ಹೇಮಾವತಿ ಜಲಾಶಯ ಆವರಣದಲ್ಲಿ ಕೆಆರ್‌ಎಸ್ ಮಾದರಿ ಉದ್ಯಾನವನ ನಿರ್ಮಾಣ ಘೋಷಣೆ, ಮಂಡ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ, ಗಗನಚುಕ್ಕಿ ಜಲಪಾತ ಸ್ಥಳವನ್ನು ಅಭಿವೃದ್ಧಿಪಡಿಸಿ, ರೋಪ್‌ವೇ ಅಳವಡಿಸಲು ಅನುದಾನ, ಚಾಮರಾಜನಗರ ರೈತರ ಜೀವನಾಡಿ ಕಬಿನಿ ಎರಡನೇ ಹಂತದ ಯೋಜನೆ ಜಾರಿ ಘೋಷಣೆ, ಮಲೆ ಮಹಾದೇಶ್ವರಬೆಟ್ಟ ವನ್ಯಧಾಮವನ್ನು ಹುಲಿ ಯೋಜನೆಯನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಕನಕಪುರಕ್ಕೆ ಸಿಗಲಿದೆಯಾ ವೈದ್ಯ ಕಾಲೇಜು:ರಾಮನಗರ ಜಿಲ್ಲೆ ಕಾಂಗ್ರೆಸ್, ಜೆಡಿಎಸ್ ನಡುವಿನ ಜಿದ್ದಾಜಿದ್ದಿ ಪೈಪೋಟಿ ಇರುವ ಜಿಲ್ಲೆಯಾಗಿದ್ದು, ಇಲ್ಲಿ ಬಿಜೆಪಿ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುತ್ತಿದೆ. ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿ ಬಿಜೆಪಿ ಸರ್ಕಾರ ಬಂದ ನಂತರ ರದ್ದುಗೊಂಡಿದ್ದ ಕನಕಪುರ ವೈದ್ಯಕೀಯ ಕಾಲೇಜು ಮರು ಘೋಷಣೆ ಮಾಡಿ ಬಿಜೆಪಿಗೆ ಬಲ ತುಂಬುವ ನಿರೀಕ್ಷೆ ಇದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೂ ಅನುದಾನ ಪ್ರಕಟಿಸುವ ಸಾಧ್ಯತೆ ಇದೆ. ಆ ಮೂಲಕ ಜಿಲ್ಲೆಯಲ್ಲಿ ಕಮಲ ಅರಳಿಸಲು ಪ್ರಯತ್ನ ನಡೆಸಲಾಗುತ್ತದೆ.
ಕೊಡುಗೆ ಜಿಲ್ಲೆ:ಇನ್ನು ಬಿಜೆಪಿ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿಗಾಗಿ ಕೊಡಗಿನ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್, ಸುಸಜ್ಜಿತ ಕ್ರೀಡಾಂಗಣ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸುವ ಸಾಧ್ಯತೆ ಇದೆ. ಮಧ್ಯ ಕರ್ನಾಟಕದ ಹೃದಯ ಭಾಗವಾದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಘೋಷಣೆ, ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಗೆ ಅನುದಾನ, ದಾವಣಗೆರೆ-ಚಿತ್ರದುರ್ಗ - ತುಮಕೂರು ನೇರ ರೈಲ್ವೆ ಮಾರ್ಗದ ಭೂಸ್ವಾಧೀನಕ್ಕೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು:ಇನ್ನು ಆಪರೇಷನ್ ಕಮಲದ ಮೂಲಕ ಚಿಕ್ಕಬಳ್ಳಾಪುರದಲ್ಲಿ ಅರಳಿರುವ ಕಮಲವನ್ನು ಸದೃಢಗೊಳಿಸಲು ಎತ್ತಿನಹೊಳೆಯಿಂದ ಜಿಲ್ಲೆಗೆ ನೀರು,ಎಚ್‌ಎನ್ ವ್ಯಾಲಿ ನೀರಿನ ಮೂರು ಹಂತದ ಶುದ್ಧೀಕರಣಕ್ಕೆ ಅನುದಾನ ಬಿಡುಗಡೆ, ಕೋಲಾರದಲ್ಲಿ ಚಿನ್ನದ ಗಣಿ ವಿಚಾರದಲ್ಲಿ ಸ್ಪಷ್ಟತೆ ನೀಡುವ ಸಾಧ್ಯತೆ ಇದೆ.
ಹೆಜಮಾಡಿ ಬಂದರು ನಿರ್ಮಾಣ: ಬಿಜೆಪಿ ಭದ್ರಕೋಟೆ ಕರಾವಳಿಗೂ ಭರಪೂರ ಕೊಡುಗೆ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಕಡಲ ತೀರಗಳ ಅಭಿವೃದ್ಧಿಗೆ ಅನುದಾನ, ಹೆಜಮಾಡಿ ಬಂದರು ನಿರ್ಮಾಣ, ಎಲ್ಲ ಬಂದರುಗಳ ಹೂಳೆತ್ತಲು ಅನುದಾನ ಪ್ರಕಟಿಸುವ ಸಾಧ್ಯತೆ ಇದೆ.
ಬೆಳಗಾವಿ ಸಕ್ಕರೆ ಜಿಲ್ಲೆಗೆ ಸಿಗಲಿದೆ ಸಿಹಿ: ಬೆಂಗಳೂರು ನಂತರ ಅತಿದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು, ಇಲ್ಲಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿ ಹಾಗೂ ಹೆಚ್ಚಿನ ಅನುದಾನ ಪ್ರಕಟಿಸಿ ಜಿಲ್ಲೆಯ ಜನರನ್ನು ಆಕರ್ಷಿಸುವ ಸಾಧ್ಯತೆ ಇದೆ. ಮಹದಾಯಿ ಕಾಮಗಾರಿಗೆ ಹೆಚ್ಚಿನ ಹಣ ಮೀಸಲಿಟ್ಟು ಕಾಮಗಾರಿ ಆರಂಭದ ಘೋಷಣೆ ಮಾಡುವ ಸಾಧ್ಯತೆ ಇದೆ. ಹುಬ್ಬಳ್ಳಿ ಧಾರವಾಡದಲ್ಲಿ ಮೆಟ್ರೋ ಆರಂಭಕ್ಕೆ ಅನುದಾನ ಪ್ರಕಟಿಸುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಬೇಡಿಕೆಯಂತೆ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಾಧ್ಯತೆ ಇದೆ.