ಬೆಂಗಳೂರು/ಬೆಳಗಾವಿ: ಸೋಮವಾರದಿಂದ ಮುಂದಿನ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಚುನಾವಣೆ ಅಂಚಿನಲ್ಲಿ ಬಂದಿರುವ ಬೆಳಗಾವಿ ಅಧಿವೇಶನ ಸಾಕಷ್ಟು ಕುತೂಹಲ ಮೂಡಿಸಿದೆ.
ರಾಜ್ಯದ ರಾಜಕೀಯ ಚಟುವಟಿಕೆ ಕುಂದಾನಗರಿಗೆ ಶಿಫ್ಟ್ ಆಗಲಿದೆ. ಚುನಾವಣಾ ವರ್ಷವಾಗಿರುವ ಕಾರಣ ಉಭಯ ಸದನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ಮಾತಿನ ಕದನ ನಡೆಯಲಿದೆ. ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಭರ್ಜರಿ ತಯಾರಿ ನಡೆಸಿದ್ದರೆ, ಇತ್ತ ಆಡಳಿತ ಪಕ್ಷವೂ ಪ್ರತಿಪಕ್ಷಗಳಿಗೆ ತಿರುಗುಬಾಣ ಹೂಡಲು ಸಿದ್ಧವಾಗಿದೆ.
ಇತ್ತ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಹತ್ತು ಹಲವು ಅಸ್ತ್ರಗಳೊಂದಿಗೆ ಬೊಮ್ಮಾಯಿ ಸರ್ಕಾರದ ವಿರುದ್ಧ ಹೋರಾಡಲಿರುವ ಕಾಂಗ್ರೆಸ್, 40% ಕಮಿಷನ್, ಭ್ರಷ್ಟಾಚಾರ, ಎಸ್ಸಿ, ಎಸ್ಟಿ ಮೀಸಲಾತಿ ಸಂಬಂಧ ಶೆಡ್ಯೂಲ್ 9 ತಿದ್ದುಪಡಿ, ಕಾನೂನು ಸುವ್ಯವಸ್ಥೆ, ಬಿಜೆಪಿಯ ರೌಡಿಗಳ ಸೇರ್ಪಡೆ, ನೀರಾವರಿ ಯೋಜನೆಗಳ ಜಾರಿ ವಿಳಂಬ ಸೇರಿದಂತೆ ಹಲವು ವಿಚಾರಗಳೊಂದಿಗೆ ಸರ್ಕಾರವನ್ನು ಕಟ್ಟಿ ಹಾಕಲು ತಂತ್ರ ರೂಪಿಸಿದೆ.
ಇತ್ತ ಕಬ್ಬು ಬೆಳೆಗಾರರ ಸಮಸ್ಯೆ, ತೊಗರಿ ಬೆಳೆ ನಾಶ ಜೊತೆಗೆ ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆಯೂ ಚರ್ಚೆಯಾಗಲಿದೆ. ಈ ಮಧ್ಯೆ, ವಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಲು ಆಡಳಿತಾರೂಢ ಬಿಜೆಪಿ ಸಿದ್ಧತೆ ನಡೆಸಿದೆ ಮತ್ತು ವಿಪಕ್ಷಗಳ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಲು ಸರ್ಕಾರ ಸಜ್ಜಾಗಿದೆ.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ವಿಧೇಯಕ ಮಂಡನೆ:ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ವಿಧೇಯಕ ಮಂಡನೆಯಾಗಲಿದೆ. ಈಗಾಗಲೇ ಸುಗ್ರೀವಾಜ್ಞೆ ಮೂಲಕ ಮೀಸಲಾತಿ ಹೆಚ್ಚಳ ಜಾರಿಗೆ ತಂದಿರುವ ಬೊಮ್ಮಾಯಿ ಸರ್ಕಾರ ವಿಧಾನಮಂಡಲದಲ್ಲಿ ಈ ಸಂಬಂಧ ವಿಧೇಯಕ ಮಂಡಿಸಿ ಕಾಯ್ದೆ ರೂಪದಲ್ಲಿ ಜಾರಿಗೆ ತರಲಿದೆ.