ಬೆಂಗಳೂರು: ವಿಧಾನ ಪರಿಷತ್ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿಗಳ ಪರವಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಜೆಟ್ ಮಂಡಿಸಿದರು. ಆಯವ್ಯಯ ಮಂಡನೆ ಆದ ಬಳಿಕ ಮಾತನಾಡಿದ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್, ನಮಗೂ ಮುಖ್ಯಮಂತ್ರಿಗಳು ಬಜೆಟ್ ಭಾಷಣ ಓದುವುದನ್ನು ಕೇಳುವ ಆಸೆ ಇದೆ. ಮುಂದಿನ ಸಾರಿಯಾದರೂ ಇದಕ್ಕೊಂದು ಅವಕಾಶ ಕಲ್ಪಿಸಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಸಭಾಪತಿಗಳು, ನನಗೂ ಈ ಬಗ್ಗೆ ಆಸೆ ಇದೆ. ಈ ಬಾರಿಯೇ ಇದಕ್ಕೊಂದು ಅವಕಾಶ ಮಾಡಿಕೊಡುವ ಪ್ರಯತ್ನ ನಡೆಸಿದ್ದೆ. ಬರುವ ವರ್ಷದ ಬಜೆಟ್ ವೇಳೆಗಾದರೂ ಈ ನಿಟ್ಟಿನಲ್ಲಿ ಜಂಟಿ ಅಧಿವೇಶನ ನಡೆಸಿ ಅಲ್ಲಿಯೇ ವಿಧಾನಪರಿಷತ್ ಸದಸ್ಯರು ಕುಳಿತು ಬಜೆಟ್ ವೀಕ್ಷಿಸುವ ಅವಕಾಶ ಕಲ್ಪಿಸಲು ಪ್ರಯತ್ನ ಮಾಡುತ್ತೇನೆ. ಈ ಸಂಬಂಧ ಸಭಾಧ್ಯಕ್ಷರ ಜೊತೆ ಸಭೆ ನಡೆಸಿ ಸಮಾಲೋಚಿಸುವ ಭರವಸೆ ನೀಡಿದರು.
ಇದೇ ವೇಳೆ ವಿಧಾನಪರಿಷತ್ ಹಲವು ಸದಸ್ಯರು ಎದ್ದು ನಿಂತು ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಸಾಕಷ್ಟು ಕಡಿಮೆಯಾಗಿವೆ. ಇದರಿಂದ ವಿಧಾನ ಪರಿಷತ್ತಿನಲ್ಲಿ ಅಳವಡಿಸಿರುವ ಗಾಜಿನ ಶೀಟ್ಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದರು.