ಕರ್ನಾಟಕ

karnataka

ETV Bharat / state

ದೇಶದ ಇಂದಿನ ಪ್ರಗತಿಗೆ 60 ವರ್ಷದಲ್ಲಿ ಕಾಂಗ್ರೆಸ್‌ ಕೊಟ್ಟ ಕೊಡುಗೆ ಕಾರಣ: ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ - ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ

ಇನ್ಫೋಸಿಸ್ ಸಂಸ್ಥೆಗೆ ಆರ್​​ಎಸ್ಎಸ್ ನಾಯಕರ ಜತೆ ಬಾಂಧವ್ಯ ಇದೆ. ಇದೇ ರೀತಿ ವಿವಿಧ ಸಂಸ್ಥೆ ಮುಖ್ಯಸ್ಥರಿಗೆ ಬಿಜೆಪಿ, ಸಂಘ ಪರಿವಾರದ ಜತೆ ಸಂಬಂಧ ಇದೆ ಎನ್ನುವುದಕ್ಕೆ ಮಾಧ್ಯಮ ಪ್ರಕಟಣೆಗಳು ಸಾಕ್ಷಿ. ಇದನ್ನು ಸದನಕ್ಕೆ ಒಪ್ಪಿಸುತ್ತೇನೆ. ಅದನ್ನು ಪ್ರಶ್ನೆ ಮಾಡಿದ ಆಡಳಿತ ಪಕ್ಷದ ಸದಸ್ಯರಿಗೆ ನೀಡಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಭಾಪತಿಗಳಿಗೆ ತಿಳಿಸಿದರು .

ಬಿ ಕೆ ಹರಿಪ್ರಸಾದ್
ಬಿ ಕೆ ಹರಿಪ್ರಸಾದ್

By

Published : Mar 9, 2022, 6:57 PM IST

ಬೆಂಗಳೂರು : ಸಂಘಪರಿವಾರದ ವಿರುದ್ಧ ತಾವು ಮಾಡಿದ ಆರೋಪಕ್ಕೆ ಮಾಧ್ಯಮ ಪ್ರಕಟಣೆಗಳ ಪ್ರತಿಯನ್ನು ಸದನಕ್ಕೆ ದಾಖಲೆ ರೂಪದಲ್ಲಿ ಒದಗಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. ಇದೇ ವೇಳೆ, ದೇಶದ ಇಂದಿನ ಪ್ರಗತಿಗೆ ಕಾಂಗ್ರೆಸ್‌ ಪಕ್ಷದ ಕೊಡುಗೆ ಕಾರಣ ಎಂದರು.

ವಿಧಾನ ಪರಿಷತ್​​ನಲ್ಲಿ ಬಜೆಟ್ ಮೇಲೆ ಮಾತನಾಡಿದ ಸಂದರ್ಭದಲ್ಲಿ, ಬೆಳಗ್ಗೆ ನಾನು ಸಂಘ ಪರಿವಾರ ಹಾಗೂ ಆರ್​​​ಎಸ್ಎಸ್ ವಿರುದ್ಧ ಆರೋಪಿಸಿದ್ದೆ. ಜತೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಗ್ಗೆ ಪ್ರಸ್ತಾಪಿಸಿದ್ದೆ. ಅದಕ್ಕೆ ಆಡಳಿತ ಪಕ್ಷ ಸದಸ್ಯರು ದಾಖಲೆ ಕೇಳಿದ್ದರು. ದಾಖಲೆ ನೀಡುತ್ತಿದ್ದೇನೆ. ಇನ್ಫೋಸಿಸ್ ಸಂಸ್ಥೆಗೆ ಆರ್​​ಎಸ್ಎಸ್ ನಾಯಕರ ಜತೆ ಬಾಂಧವ್ಯ ಇದೆ. ಇದೇ ರೀತಿ ವಿವಿಧ ಸಂಸ್ಥೆ ಮುಖ್ಯಸ್ಥರು ಬಿಜೆಪಿ, ಸಂಘ ಪರಿವಾರದ ಜತೆ ಸಂಬಂಧ ಇದೆ ಎನ್ನುವುದಕ್ಕೆ ಮಾಧ್ಯಮ ಪ್ರಕಟಣೆಗಳು ಸಾಕ್ಷಿ. ಇದನ್ನು ಸದನಕ್ಕೆ ಒಪ್ಪಿಸುತ್ತೇನೆ. ಅದನ್ನು ಪ್ರಶ್ನೆ ಮಾಡಿದ ಆಡಳಿತ ಪಕ್ಷದ ಸದಸ್ಯರಿಗೆ ನೀಡಿ ಎಂದರು.

ದೇಶದ ಪ್ರಗತಿಗೆ ಕಾಂಗ್ರೆಸ್ ಕೊಡುಗೆ ಕಾರಣ:ದೇಶದಲ್ಲಿ ಇಂದು ಆಗಿರುವ ಪ್ರಗತಿಗೆ 60 ವರ್ಷದಲ್ಲಿ ಕಾಂಗ್ರೆಸ್ ನೀಡಿರುವ ಕೊಡುಗೆ ಕಾರಣ. ಸಾಕಷ್ಟು ಕ್ಷೇತ್ರಕ್ಕೆ ಉತ್ತೇಜನ ನೀಡಬೇಕಿತ್ತು. ಆದರೆ ಬಸವರಾಜ ಬೊಮ್ಮಾಯಿ ಇಂತದ್ದೊಂದು ಬಜೆಟ್ ನೀಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಯಾವುದೇ ತೆರಿಗೆ ಘೋಷಿಸಿಲ್ಲ. ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡುತ್ತಾರೆ. ಕೇಂದ್ರದಿಂದ ಅನುದಾನ ಸಿಕ್ಕರೆ ಮಾಡುತ್ತೇವೆ ಎನ್ನುವುದೇ ಅರ್ಧ ಬಜೆಟ್​​ನಲ್ಲಿದೆ. ಈಗಿರುವ ಗೋಶಾಲೆಗೆ ಸಿಬ್ಬಂದಿ ಇಲ್ಲ. ಇನ್ನೂ ಹೊಸ 100 ಕೇಂದ್ರ ಆರಂಭಿಸುವ ಘೋಷಣೆ ಆಗಿದೆ. ಹಾಲು ಉತ್ಪಾದಕ ಸಹಕಾರ ಸಂಘಗಳು ಸ್ವಾಯತ್ತವಾಗಿ ಉತ್ತಮವಾಗಿ ನಡೆಯುತ್ತಿವೆ. ಅಲ್ಲಿ ಕೈ ಹಾಕುವುದು ಬೇಡ. ಇದರ ಮಧ್ಯೆ ಗೋವಿನ ಸಂರಕ್ಷಣೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಹಲವು ಯೋಜನೆಗಳಿಗೆ ಶೂನ್ಯ ಅನುದಾನ ನೀಡಲಾಗಿದೆ. ಶಿಕ್ಷಕರ ತರಬೇತಿಗೆ ಹಣ ನೀಡಿಲ್ಲ. ಹಲವು ಇಲಾಖೆಗೆ ನೀಡುವ ಹಣ ಕಡಿಮೆ ಆಗಿದೆ ಸ್ಕಿಲ್ ಇಂಡಿಯಾ, ಕೌಶಲ್ಯ ಇಂಡಿಯಾ, ಮೇಕ್ ಇನ್ ಇಂಡಿಯಾ ಇದ್ದದ್ದು ಆತ್ಮನಿರ್ಬರದಿಂದ ಆತ್ಮಹತ್ಯಾ ಇಂಡಿಯಾ ಆಗಿದೆ. ಕೃಷಿ ಬಗ್ಗೆ 16 ಪುಟ ವಿವರಣೆ ಇದೆ. ಹಲವು ಕಾರ್ಯಕ್ರಮಕ್ಕೆ ಹಣ ನೀಡಿಲ್ಲ. ರಾಷ್ಟ್ರೀಯ ಆಹಾರ ಭದ್ರತೆಗೇ ಹಣ ನೀಡಿಲ್ಲ. ಇದು ಕಾನೂನು. ಕಾರ್ಯಕ್ರಮ ಅಲ್ಲ. ಆದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನೀಡಿದ ಮಹತ್ವದ ಕಾರ್ಯವಾಗಿತ್ತು. ಇದಕ್ಕೇ ಹಣ ನೀಡಿಲ್ಲ ಅನ್ನುವುದು ಬೇಸರ ಎಂದರು.

ಜಿಎಸ್​​ಟಿ ಪರಿಹಾರ ತರುವಲ್ಲಿ ರಾಜ್ಯ ವಿಫಲ:ಸತ್ಯ ಹೇಳಿದರೆ ಯಾವತ್ತೂ ಕಹಿ. ಯಾರನ್ನೋ ದ್ವೇಷಿಸುವುದನ್ನು ದೇಶಪ್ರೇಮ ಎನ್ನುವುದು ಸರಿಯಲ್ಲ. ಬಿಜೆಪಿಯವರು ನನ್ನ ವಿರೋಧಿಗಳು, ಶತ್ರುಗಳಲ್ಲ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬಿಜೆಪಿ ನಾಯಕರು ಯಾರಿದ್ದರು? ಇದೊಂದು ಸೈದ್ಧಾಂತಿಕ ವಿರೋಧ ನಮಗೂ ಇದೆ. ಇಂದು ಕೇಂದ್ರ ಸರ್ಕಾರ ಅವಲಂಬಿಸಿ ರಾಜ್ಯ ಬಜೆಟ್ ನಿಂತಿದೆ. ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಹಣ ಇಟ್ಟಿಲ್ಲ ಅಂದರೆ, ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಹಣ ಎಲ್ಲಿಂದ ಸಿಗಲು ಸಾಧ್ಯ. ಕೇಂದ್ರದಿಂದ ಜಿಎಸ್​​ಟಿ ಪರಿಹಾರ ತರುವಲ್ಲಿಯೂ ಸರ್ಕಾರ ವಿಫಲವಾಗಿದೆ. ಅಭಿವೃದ್ಧಿ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಗೆ, ಬರಬೇಕಾದ ಸಬ್ಸಿಡಿಗೆ ಅನುದಾನ ಕಡಿಮೆ ಆಗಿದೆ. ದುರ್ಬಲ ವರ್ಗದವರಿಗೆ ಬರಬೇಕಿರುವ ಅನುದಾನ 1,000 ಕೋಟಿ ಕಡಿಮೆ ಆಗಿದೆ. ಕಟ್ಟಡ, ಸೇತುವೆ ಸೇರಿದಂತೆ ಆಸ್ತಿ ಸೃಷ್ಟಿಸಿದ ಯಾವುದೇ ಮಾಹಿತಿ ಇಲ್ಲ. ಡಬಲ್ ಎಂಜಿನ್ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎನ್ನುವುದು ಅರಿವಾಗುತ್ತಿದೆ. ನೀರಾವರಿಗೆ ಮೀಸಲಿಟ್ಟ ಹಣ ಗಮನಿಸಿದಾಗ ಇವರ ಬದ್ಧತೆ ಏನು ಎನ್ನುವುದು ಅರಿವಾಗುತ್ತದೆ.

ಮೇಕೆದಾಟು ಪಾದಯಾತ್ರೆ ಆರಂಭಿಸಿದಾಗ ರಾಜಕೀಯ ಮಾಡುತ್ತಾರೆ ಎಂದಿದ್ದರು. 10 ಸಾವಿರ ಕೋಟಿ ರೂ. ಕೇಳಿದ್ದೆವು. 5 ಸಾವಿರ ಕೋಟಿ ಆದರೂ ನೀಡಬಹುದಿತ್ತು. 1,000 ಕೋಟಿ ಘೋಷಿಸಿದ್ದಾರೆ. ನಮ್ಮ ಹೋರಾಟ ಒಪ್ಪಿಕೊಂಡಂತೆ ಅಲ್ಲವೇ? ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುವ ಬದಲು ಹಿಜಾಬ್ ಮುಂತಾದ ವಿಚಾರ ಮುಂದಿಟ್ಟು ಶಿಕ್ಷಣದಿಂದ ಹೆಣ್ಣು ಮಕ್ಕಳನ್ನು ದೂಡ ಇಡಲಾಗುತ್ತಿದೆ. ಕೋವಿಡ್ ಸಂದರ್ಭ ಆತ್ಮವಿಶ್ವಾಸ ಹೆಚ್ಚಿಸಬೇಕಿತ್ತು. ಗುರುದ್ವಾರಗಳಿಗೆ ಸಹಾಯ ಮಾಡಬೇಕಿತ್ತು. ಜನ ಉದ್ಯೋಗ ಇಲ್ಲದೇ ನಗರದಿಂದ ಹಳ್ಳಿಗೆ ಜನ ವಲಸೆ ಹೋದರು. ಸರ್ಕಾರ ಇವರಿಗಾಗಿ ಏನನ್ನೂ ಮಾಡಿಲ್ಲ. ರಾಜ್ಯದಲ್ಲಿ ಹಿಂದೆ ನಾವು ಮಾಡಿರುವ ಕಾರ್ಯ ಹೆಮ್ಮೆ ತರಿಸುತ್ತದೆ. ಆದರೆ ಈ ಸರ್ಕಾರ ಬಜೆಟ್‌ನಲ್ಲಿ ಮಾಡಲಾಗುವುದು, ತರಿಸಲಾಗುವುದು, ಮೀಸಲಿಡಲಾಗುವುದು, ಪ್ರಸ್ತಾಪಿಸಲಾಗುವುದು ಇತ್ಯಾದಿಗಳು ಮಾತ್ರ ಇದೆ ಎಂದು ದೂರಿದರು.

ಬಿಜೆಪಿ ಅಧಿಕಾರ ಬೆಂಗಳೂರಿಗೆ ಮಾರಕ:ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗೆಲ್ಲಾ ಬೆಂಗಳೂರಿಗೆ ಮಾರಕವೇ ಆಗಿದೆ. ಮೊದಲಬಾರಿ ಅಧಿಕಾರಕ್ಕೆ ಬಂದಾಗ ಗಾರ್ಬೇಜ್ ಸಿಟಿ ಆಗಿತ್ತು. ಈಗ ರಸ್ತೆ ಗುಂಡಿ ಸಿಟಿಯಾಗಿದೆ. ಹೈಕೋರ್ಟ್ ಚಾಟಿ ಬೀಸಿದರೂ ಪ್ರಯೋಜನ ಆಗಿಲ್ಲ. ಕಾರ್ಪೊರೇಷನ್ ಮೇಲೆ ದಾಳಿ ಆಗಿದೆ. ಎಷ್ಟು ಜನರ ಮೇಲೆ ಎಫ್ಐಆರ್ ಆಗಿದೆ ಎಂಬ ವಿವರ ಇಲ್ಲ.

ಇದುವರೆಗೂ ಎಸಿಬಿ, ಲೋಕಾಯುಕ್ತ ದಾಳಿಯಲ್ಲಿ ಕ್ರಮದ ವಿವರ ನೀಡಿಲ್ಲ. ರಾಜಕಾಲುವೆ, ತ್ಯಾಜ್ಯ ಸಮರ್ಪಕ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಈ ಡಬಲ್ ಇಂಜಿನ್ ಸರ್ಕಾರಕ್ಕೆ ಟ್ರ್ಯಾಕ್ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಸರ್ಕಾರಕ್ಕೆ ನಡೆಯುವ ಶಕ್ತಿ ಇಲ್ಲ. ಅದಕ್ಕೆ ಡಬಲ್ ಎಂಜಿನ್ ಸರ್ಕಾರವಾಗಿದೆ. ರೈತರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಸರ್ವರ ವಿರೋಧಿ ಬಜೆಟ್ ಆಗಿದೆ ಹಾಗಾಗಿ ನಾನು ಸಾರಾಸಗಟಾಗಿ ತಿರಸ್ಕರಿಸುತ್ತೇನೆ ಎಂದರು.

For All Latest Updates

TAGGED:

ABOUT THE AUTHOR

...view details