ಬೆಂಗಳೂರು: ಕೆಂಪು ಕೋಟೆಯಲ್ಲೂ ಕೇಸರಿ ಬಾವುಟ ಹಾರಿಸುತ್ತೇವೆ ಎಂಬ ಸಚಿವ ಈಶ್ವರಪ್ಪ ಹೇಳಿಕೆ ಸಂವಿಧಾನ ಬಾಹಿರ ಎಂದು ಪ್ರತಿಪಕ್ಷ ಕಾಂಗ್ರೆಸ್ ಇಂದು ಉಭಯ ಸದನದಲ್ಲಿ ಪ್ರತಿಭಟನೆ ನಡೆಸಿತು. ಸಚಿವರನ್ನು ತಕ್ಷಣ ಸಂಪುಟದಿಂದ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಈ ವಿಚಾರವಾಗಿ ಸದನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಹೀಗಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗೆಡೆ ಕಾಗೇರಿ ಸದನವನ್ನ ಕೆಲಕಾಲ ಮುಂದೂಡಿದರು. ಕೆಲ ನಿಮಿಷಗಳ ಬಳಿಕ ಸಭೆ ಆರಂಭವಾದಾಗಲೂ ಗದ್ದಲ ಏರ್ಪಟ್ಟಿದ್ದರಿಂದ ಸದನವನ್ನು ನಾಳೆಗೆ ಮುಂದೂಡಲಾಯಿತು.
ಇನ್ನು ವಿಧಾನ ಪರಿಷತ್ನಲ್ಲೂ ಇದೇ ಗದ್ದಲ ಮುಂದುವರೆಯಿತು. ವಿಧಾನ ಪರಿಷತ್ ಕಲಾಪದ ಭೋಜನ ವಿರಾಮದ ಬಳಿಕ ಸಭಾಪತಿಗಳು ಪ್ರಶ್ನೋತ್ತರ ಅವಧಿಗೆ ಮುಂದಾದ ಸಂದರ್ಭ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ಬೆಳಗ್ಗೆ ತಿರಸ್ಕರಿಸಲಾದ ನಿಲುವಳಿ ಸೂಚನೆ ಮೇಲೆ ಚರ್ಚಿಸಲು ಇನ್ನೊಮ್ಮೆ ಅವಕಾಶ ನೀಡಿ ಎಂದರು. ದೇಶದ್ರೋಹದ ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ಅವರನ್ನು ಜೈಲಿಗೆ ಕಳುಹಿಸಬೇಕು. ಚರ್ಚೆ ಆಗಲೇಬೇಕಾಗಿದೆ ಎಂದರು.
ಇದರಿಂದ ಚರ್ಚೆಗೆ ಅವಕಾಶ ನೀಡಿ, ಇಲ್ಲಾ ಸಿಎಂ ಸದನಕ್ಕೆ ಆಗಮಿಸಿ ಉತ್ತರ ನೀಡಲಿ. ಇಲ್ಲವಾದರೆ ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ. ಸಚಿವರ ಮೂಲಕ ಲಭಿಸಿದ ಸರ್ಕಾರದ ಉತ್ತರ ಬಗ್ಗೆ ನಮಗೆ ವಿರೋಧ ಇದೆ. ಪ್ರಶ್ನೋತ್ತರ ಸೇರಿದಂತೆ ಕಲಾಪದಲ್ಲಿ ಯಾವುದೇ ಚಟುವಟಿಕೆ ಬೇಡ ಎಂದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಭಾಪತಿಗಳನ್ನು ಉದ್ದೇಶಿಸಿ ಮಾತನಾಡಿ, ಎರಡೂ ಕಡೆಯ ಮಾತು ಆಲಿಸಿ, ಸದನದ ನಿಯಮ ಮೀರಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಪೀಠದಿಂದ ತೀರ್ಪು ಬಂದಿದೆ. ಈ ಮಧ್ಯೆ ಮತ್ತೆ ಚರ್ಚೆಗೆ ಅವಕಾಶ ನೀಡುವುದು ಸರಿಯಲ್ಲ. ಚರ್ಚೆ ಅನಗತ್ಯ. ಪೀಠದ ತೀರ್ಮಾನ ಅಂತಿಮ. ಯಾವುದೇ ರೀತಿ ವಿಚಾರ ಮುಂದುವರಿಗೆ ಬೇಡ ಅಂದರು.