ಬೆಂಗಳೂರು: ಕೋವಿಡ್-19 ಹಿನ್ನೆಲೆ ವಿಧಾನಪರಿಷತ್ ಚುನಾವಣೆ ವೇಳೆ ಅನುಸರಿಸಬೇಕಾದ ಸುರಕ್ಷತಾ ಮಾರ್ಗಸೂಚಿಯನ್ನು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಹೊರಡಿಸಿದ್ದಾರೆ.
ಪರಿಷತ್ ಚುನಾವಣೆ: ಮುಂಜಾಗ್ರತಾ ಮಾರ್ಗಸೂಚಿ ಹೊರಡಿಸಿದ ಸಿಎಸ್ - Council election
ಮಹಾಮಾರಿ ಕೊರೊನಾ ಹಾವಳಿ ನಡುವೆ ಜೂ. 29ರಂದು ಪರಿಷತ್ ಚುನಾವಣೆ ನಡೆಯಲಿದೆ. ಹಾಗಾಗಿ ಈ ವೇಳೆ ಅಧಿಕಾರಿಗಳು ಕೆಲವು ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚನೆ ಹೊರಡಿಸಲಾಗಿದೆ.
ಜೂ. 29ರಂದು ಪರಿಷತ್ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ಕೊರೊನಾ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಅದರಂತೆ ಚುನಾವಣೆ ವೇಳೆ ಚುನಾವಣಾ ಅಧಿಕಾರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಕ್ರಮ ವಹಿಸಬೇಕು. ಚುನಾವಣಾ ಪ್ರಕ್ರಿಯೆ ವೇಳೆ ಚುನಾವಣಾ ಸಿಬ್ಬಂದಿ, ಮತದಾರರು, ಏಜೆಂಟ್‌ಗಳು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಧಾರಣೆ ಮಾಡಬೇಕು ಎಂದು ತಿಳಿಸಲಾಗಿದೆ.
ಚುನಾವಣಾಧಿಕಾರಿಯಿಂದ ಅನುಮತಿ ಪಡೆದ ಅಭ್ಯರ್ಥಿಗಳು, ಮತದಾರರು, ಏಜೆಂಟ್‌ಗಳು, ಚುನಾವಣಾ ಸಿಬ್ಬಂದಿ ಕಂಟೇನ್ಮೆಂಟ್ ವಲಯದಲ್ಲಿ ಇದ್ದರೆ ಅವರಿಗೆ ಚುನಾವಣೆ ಉದ್ದೇಶಕ್ಕಾಗಿ ಮಾತ್ರ ಅನಿರ್ಬಂಧಿತ ಓಡಾಟಕ್ಕೆ ಅನುಮತಿ ನೀಡಬಹುದಾಗಿದೆ. ಅದೇ ರೀತಿ 65 ವರ್ಷ ಮೇಲ್ಪಟ್ಟ ಮತದಾರರು, ಅಭ್ಯರ್ಥಿಗಳು, ಚುನಾವಣಾ ಸಿಬ್ಬಂದಿಗೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಕ್ವಾರಂಟೈನ್ನಲ್ಲಿರುವ ಶಾಸಕರ ವಿವರವನ್ನು ನೀಡಬೇಕು. ಅವರ ಪ್ರಯಾಣ ವೇಳಾಪಟ್ಟಿಯನ್ನು ನೀಡಬೇಕು. ಜೊತೆಗೆ ಎಲ್ಲಾ ಅಭ್ಯರ್ಥಿಗಳು, ಮತದಾರರ ಸಂಚಾರದ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚಿಸಲಾಗಿದೆ.