ಕರ್ನಾಟಕ

karnataka

ETV Bharat / state

ಪರಿಷತ್ ಚುನಾವಣೆ: 3 ಸ್ಥಾನಗಳಲ್ಲೂ ಕಾಂಗ್ರೆಸ್​ಗೆ ಜಯ, ಬಿಜೆಪಿಗೆ ಶೂನ್ಯ ಸಾಧ್ಯತೆ - ಬಿಜೆಪಿಗೆ ಶೂನ್ಯ

ವಿಧಾನಪರಿಷತ್ತಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

Council election
ಮೇಲ್ಮನೆ ಚುನಾವಣೆ: ಮೂರು ಸ್ಥಾನಗಳಲ್ಲೂ ಕಾಂಗ್ರೆಸ್​ಗೆ ಜಯ, ಬಿಜೆಪಿಗೆ 'ಶೂನ್ಯ'

By

Published : Jun 7, 2023, 10:57 PM IST

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ ಮೂರg ಸ್ಥಾನಗಳಿಗೆ ಈ ತಿಂಗಳ ಅಂತ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಎಲ್ಲ ಮೂರು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಉಪ ಚುನಾವಣೆಗೆ ಪ್ರತ್ಯೇಕ ಚುನಾವಣೆ ಅಧಿಸೂಚನೆ ಹೊರಡಿಸುವುದರಿಂದ ವಿಧಾನಸಭೆಯಲ್ಲಿ ಅತಿಹೆಚ್ಚಿನ ಶಾಸಕರ ಬಲ ಹೊಂದಿರುವ ಆಡಳಿತ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸುವುದು ನಿಶ್ಚಿತವಾಗಿದೆ.

ಉಪ ಚುನಾವಣೆಗೆ ಚುನಾವಣೆ ಅಧಿಕಾರಿಗಳು ಪ್ರತ್ಯೇಕ ಅಧಿಸೂಚನೆ ಹೊರಡಿಸುವುದರಿಂದ ಹಾಗೂ ಚುನಾವಣೆಯು ರಾಜೀನಾಮೆ ನೀಡಿರುವ ಸದಸ್ಯರ ಬಾಕಿ ಇರುವ ಅವಧಿಗೆ ನಡೆಯುವುದರಿಂದ ಹೆಚ್ಚಿನ ಶಾಸಕರ ಸಂಖ್ಯಾಬಲ ಹೊಂದಿದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರತುಪಡಿಸಿ ಬಿಜೆಪಿ ಅಥವಾ ಜೆಡಿಎಸ್​​ನ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟಕರವಾಗಲಿದೆ.

''ಜೂನ್ 30 ರಂದು ನಡೆಯುವ ಉಪ ಚುನಾವಣೆಗೆ ಪ್ರತ್ಯೇಕ ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ಚುನಾವಣೆ ನಡೆಯುವುದು ಒಂದೇ ದಿನವಾದರೂ ಸದಸ್ಯರ ಅವಧಿ ಬೇರೆ ಬೇರೆಯಾಗಿದ್ದರಿಂದ ಪ್ರತಿ ಸದಸ್ಯರ ಅವಧಿಗೆ ಒಂದೊಂದು ಚುನಾವಣೆ ನೋಟಿಫಿಕೇಶನ್ ಹೊರಡಿಸಲಾಗುತ್ತದೆ. ಪ್ರತ್ಯೇಕ ಅಧಿಸೂಚನೆ ಹೊರಡಿಸುವುದರಿಂದ ಎಲ್ಲ ಮೂರೂ ಸ್ಥಾನಗಳನ್ನು ವಿಧಾನಸಭೆಯಲ್ಲಿ ಹೆಚ್ಚಿನ ಶಾಸಕರ ಸಂಖ್ಯಾಬಲ ಹೊಂದಿರುವ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ" ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ವಿಧಾನಪರಿಷತ್ತಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮೂರೂ ಸೀಟುಗಳಿಗೆ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಗೆಲ್ಲಲು ಅವಕಾಶವಿಲ್ಲದ್ದರಿಂದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದೂ ಸಹ ಅನುಮಾನ ಎಂದು ಪಕ್ಷಗಳ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಾಜಿ ಸಚಿವರುಗಳಾದ ಬಾಬುರಾವ್ ಚಿಂಚನಸೂರ್ ಹಾಗೂ ಆರ್.ಶಂಕರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆಯನ್ನು ಈಗಾಗಲೇ ಘೋಷಣೆ ಮಾಡಿದ್ದು, ಇದೇ ತಿಂಗಳ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ವಿಧಾನ ಪರಿಷತ್ತಿಗೆ ರಾಜೀನಾಮೆ ನೀಡಿದ ಸದಸ್ಯರ ಅವಧಿ ಬೇರೆ ಬೇರೆಯಾಗಿದ್ದರಿಂದ ಚುನಾವಣಾ ಆಯೋಗವು ಪ್ರತಿ ಸದಸ್ಯರ ಅವಧಿಗೆ ಪ್ರತ್ಯೇಕ ಚುನಾವಣಾ ಅಧಿಸೂಚನೆ ಹೊರಡಿಸಲಿದೆ. ಆಗ ನಿರ್ದಿಷ್ಟ ಅವಧಿಯ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಕಾಂಗ್ರೆಸ್‌ಗೆ 135 ಸದಸ್ಯ ಬಲ:ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 135ರ ಸದಸ್ಯ ಬಲವನ್ನು ಹೊಂದಿದೆ. ಬಿಜೆಪಿ ಮತ್ತು ಜೆಡಿಎಸ್‌ಗಿಂತ ಹೆಚ್ಚಿನ ಸಂಖ್ಯೆಯ ಸಂಖ್ಯಾಬಲವನ್ನು ಕಾಂಗ್ರೆಸ್ ಪಕ್ಷ ಹೊಂದಿದ್ದರಿಂದ ಸಹಜವಾಗಿ ಮೂರು ಸ್ಥಾನಗಳು ಕಾಂಗ್ರೆಸ್ ಪಕ್ಷದ ಪಾಲಾಗಲಿವೆ. ಉಪಚುನಾವಣೆ ನಡೆಯುತ್ತಿರುವ ಈ ಮೂರೂ ಸೀಟುಗಳು ಈ ಹಿಂದೆ ಬಿಜೆಪಿಯ ಸ್ಥಾನಗಳಾಗಿದ್ದವು. ಒಂದೇ ಅವಧಿಗಾಗಿ 3 ಸೀಟುಗಳಿಗೆ ಒಟ್ಟಿಗೆ ಚುನಾವಣೆ ನಡೆದರೆ ಸಂಖ್ಯಾಬಲವನ್ನು ಆಧರಿಸಿ ಕಾಂಗ್ರೆಸ್ ಪಕ್ಷವು ಎರಡು ಹಾಗೂ ಬಿಜೆಪಿ ಪಕ್ಷವು ಜೆಡಿಎಸ್ ನ ಬೆಂಬಲದೊಂದಿಗೆ ಒಂದು ಸ್ಥಾನವನ್ನು ಗೆಲ್ಲಲು ಅವಕಾಶವಿದೆ. ಆದರೆ ಪ್ರತ್ಯೇಕ ಚುನಾವಣೆ ಅಧಿ ಸೂಚನೆಯನ್ನು ಹೊರಡಿಸುವುದರಿಂದ ಅತಿ ಹೆಚ್ಚಿನ ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷವು ಮೂರೂ ಸ್ಥಾನಗಳನ್ನು ಗೆಲ್ಲಲಿದೆ.

ಈ ಹಿಂದೆಯೂ ಸಹ ಬಿಜೆಪಿ ಆಡಳಿತ ಪಕ್ಷದಲ್ಲಿದ್ದಾಗ ವಿಧಾನಸಭೆಯಿಂದ ವಿಧಾನಪರಿಷತ್ತಿನ ಉಪಚುನಾವಣೆಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದರ ಲಾಭವನ್ನು ಪಡೆದು ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷದ ಪಾಲಿನ ಸೀಟುಗಳನ್ನ ಗೆದ್ದಿತ್ತು. ಇತಿಹಾಸ ಮರುಕಳಿಸುತ್ತದೆ ಎನ್ನುವ ಮಾತಿನಂತೆ ಈ ಬಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಪಾಲಿನ 3 ಮೇಲ್ಮನೆ ಸೀಟುಗಳನ್ನು ಕಾಂಗ್ರೆಸ್ ಪಕ್ಷ ಸುಲಭವಾಗಿ ತನ್ನದಾಗಿಸಿಕೊಳ್ಳಲಿದೆ.

ಕಾಂಗ್ರೆಸ್​ನಲ್ಲಿ ಅಭ್ಯರ್ಥಿ ಯಾರು?: ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಚಿವ ಬೋಸರಾಜ್ ಅವರನ್ನು ಕಣಕ್ಕಿಳಿಸಲಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಲ್ಲದ ಬೋಸರಾಜ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸಚಿವರನ್ನಾಗಿ ನೇಮಕ ಮಾಡಿದ್ದರಿಂದ ಮೊದಲ ಆದ್ಯತೆಯನ್ನು ಕಾಂಗ್ರೆಸ್ ಪಕ್ಷ ಬೋಸರಾಜ್ ಅವರಿಗೆಯೇ ನೀಡಲಿದೆ. ಬಹಶಃ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಗೆ ಸಚಿವ ಬೋಸರಾಜ್ ಕೈ ಅಭ್ಯರ್ಥಿಯಾಗಲಿದ್ದಾರೆ. ಸವದಿಯವರ ಅವಧಿ 2028ರ ತನಕ ಇದ್ದಿದ್ದರಿಂದ ಈ ಅವಕಾಶ ಸಚಿವ ಭೋಸರಾಜ್ ಅವರಿಗೆ ಸಿಗುವ ಸಾಧ್ಯತೆ ಹೆಚ್ಚಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷವನ್ನ ಸೇರಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ನಿಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ. ಚಿಂಚನಸೂರ್ ಅವರು ಕೋಲಿ ಸಮಾಜಕ್ಕೆ ಸೇರಿದವರಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ ಈ ಸಮಾಜದ ಮತಗಳು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಕೋಲಿ ಸಮಾಜದ ಮತಗಳು ಅತ್ಯಗತ್ಯವಾಗಿವೆ. ಮಲ್ಲಿಕಾರ್ಜುನ ಖರ್ಗೆಯವರು ಬಾಬುರಾವ್ ಚಿಂಚನಸೂರ್ ಅವರ ಪರ ವಕಾಲತ್ತು ವಹಿಸಿ ಅವರಿಗೆ ಟಿಕೆಟ್ ಕೊಡಿಸುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

50ಕ್ಕೂ ಹೆಚ್ಚು ಆಕಾಂಕ್ಷಿಗಳು:ಇನ್ನೊಂದು ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿತರ ದೊಡ್ಡ ಪಟ್ಟಿಯೇ ಇದೆ. 50ಕ್ಕೂ ಹೆಚ್ಚು ಆಕಾಂಕ್ಷಿಗಳು ವಿಧಾನಪರಿಷತ್ತಿನ ಟಿಕೆಟ್​ಗಾಗಿ ಲಾಬಿ ಮಾಡ ತೊಡಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟಿಕೆಟ್ ವಂಚಿತರಾದ ಹಲವಾರು ಜನರಿಗೆ ವಿಧಾನ ಪರಿಷತ್ ಆಯ್ಕೆ ಭರವಸೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮೇಲ್ಮನೆ ಚುನಾವಣೆಗೆ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳಿದ್ದುದ್ದರಿಂದ ತೀವ್ರತರದ ಪೈಪೋಟಿ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬೆಂಬಲಿಗರನ್ನ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲು ಹೈಕಮಾಂಡ್​ ನೀಡುವ ಗ್ರೀನ್ ಸಿಗ್ನಲ್​ಗೆ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ:ಅಕ್ರಮ ಡಿನೋಟಿಫಿಕೇಷನ್: ಬಿಎಸ್‌ವೈ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

ABOUT THE AUTHOR

...view details