ಕರ್ನಾಟಕ

karnataka

ETV Bharat / state

ವಿಧಾನಪರಿಷತ್ ಚುನಾವಣೆ; 45 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ವಿಧಾನಪರಿಷತ್ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಪ್ರತಿಷ್ಠೆಯ ಚುನಾವಣೆಯಾಗಿದ್ದರಿಂದ ಮೂರು ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ. ಇಂದು ನಾಮಪತ್ರ ಪರಿಶೀಲನೆ ಕಾರ್ಯ ಮುಕ್ತಾಯಗೊಂಡಿದ್ದು ಊರ್ಜಿತ ಹಾಗೂ ಅನೂರ್ಜಿತಗೊಂಡ ನಾಮಪತ್ರಗಳ ಚಿತ್ರಣ ಇಲ್ಲಿದೆ.

Council election
ವಿಧಾನಪರಿಷತ್ ಚುನಾವಣೆ

By

Published : Oct 9, 2020, 11:44 PM IST

ಬೆಂಗಳೂರು : ವಿಧಾನಪರಿಷತ್​ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಾಮಪತ್ರ ಪರಿಶೀಲನೆ ಕಾರ್ಯ ಇಂದು ಮುಕ್ತಾಯವಾಗಿದ್ದು, 57 ಅಭ್ಯರ್ಥಿಗಳ ಪೈಕಿ 45 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ. ಇನ್ನು 12 ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಅಕ್ಟೋಬರ್ 12 ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಅಂದು ಹೊರಬೀಳಲಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಸಲ್ಲಿಸಿದ್ದ 12 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳ ನಾಮಪತ್ರ ಊರ್ಜಿತಗೊಂಡಿದ್ದು, ಒಂದು ನಾಮಪತ್ರವನ್ನು ಅನೂರ್ಜಿತಗೊಳಿಸಲಾಗಿದೆ. ಇನ್ನು ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಸಲ್ಲಿಕೆಯಾಗಿದ್ದ 18 ಅಭ್ಯರ್ಥಿಗಳ ನಾಮಪತ್ರವೂ ಮಾನ್ಯವಾಗಿವೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ 5 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿದ್ದು, ಮೂವರ ನಾಮಪತ್ರಗಳು ತಿರಸ್ಕೃತಗೊಂಡಿವೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸಲ್ಲಿಕೆಯಾಗಿದ್ದ 19 ಅಭ್ಯರ್ಥಿಗಳ ನಾಮಪತ್ರಗಳಲ್ಲಿ 11 ನಾಮಪತ್ರಗಳು ಸ್ವೀಕೃತಗೊಂಡಿದ್ದು, 8 ನಾಮಪತ್ರಗಳು ತಿರಸ್ಕೃತಗೊಂಡಿವೆ. ಅಕ್ಟೋಬರ್ 28 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ. ನ. 5 ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಮತಕೇಂದ್ರಗಳ ಸ್ಥಾಪನೆ :

ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗಾಗಿ 549 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 69 ಮತಕೇಂದ್ರ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 187 ಮತಕೇಂದ್ರ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 147 ಮತಕೇಂದ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 146 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 75781 ಮತದಾರರಿದ್ದು, 48584 ಪುರುಷ ಮತದಾರರು, 27186 ಮಹಿಳೆಯರು ಹಾಗೂ 11 ಇತರೆ ಮತದಾರರಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 1.09 ಲಕ್ಷ ಮತದಾರರಿದ್ದು, 68414 ಪುರುಷ ಮತದಾರರು, 40711 ಮಹಿಳೆಯರು ಮತ್ತು 4 ಇತರೆ ಮತದಾರರಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 29330 ಮತದಾರರಿದ್ದು, 19002 ಪುರುಷರು, 10326 ಮಹಿಳೆಯರು ಮತ್ತು ಇಬ್ಬರು ಇತರೆ ಮತದಾರರಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 22261 ಮತದಾರರಿದ್ದು, 7992 ಪುರುಷ ಮತದಾರರು, 14266 ಮಹಿಳೆಯರು ಮತ್ತು ಮೂವರು ಇತರೆ ಮತದಾರರಿದ್ದಾರೆ.

ವಿಧಾನಪರಿಷತ್ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆ ಸಹ ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ.

ABOUT THE AUTHOR

...view details