ಬೆಂಗಳೂರು:ಬೆಳಗಾವಿ ಅಧಿವೇಶನದಲ್ಲಿ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಡಿ.21ಕ್ಕೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಸಭಾಪತಿ ಚುನಾವಣೆ ನಡೆಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಅದರಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಡಿಸೆಂಬರ್ 21ರಂದು ಪರಿಷತ್ ಸಭಾಪತಿ ಚುನಾವಣೆ ನಡೆಸುವಂತೆ ದಿನಾಂಕ ನಿಗದಿಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ವಿಧಾನಪರಿಷತ್ ಸಭಾಪತಿ ಸ್ಥಾನ ತೆರವಾಗಿತ್ತು. ಬಳಿಕ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಲಾಗಿತ್ತು. ನಂತರ ಬಸವರಾಜ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
ನಂತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಗೂ ಮುಂಚೆಯೇ ಪರಿಷತ್ ಸಭಾಪತಿ ಮಾಡುವ ಭರವಸೆ ನೀಡಲಾಗಿತ್ತು. ಬಳಿಕ ಪಕ್ಷದಲ್ಲೇ ಹೊರಟ್ಟಿ ಅವರಿಗೆ ಸಭಾಪತಿ ನೀಡಲು ವಿರೋಧ ವ್ಯಕ್ತವಾಗಿತ್ತು. ಕುರುಬ ಸಮುದಾಯ ರಘುನಾಥ್ ರಾವ್ ಮಲ್ಕಾಪುರೆ ಅವರನ್ನೇ ಸಭಾಪತಿ ಹುದ್ದೆಯಲ್ಲಿ ಮುಂದುವರಿಸಬೇಕೆಂದು ಕುರುಬ ಸಮುದಾಯ ಒತ್ತಡ ಹೇರಿತ್ತು. ಆದರೆ, ಇದೀಗ ಬಸವರಾಜ್ ಹೊರಟ್ಟಿಗೇ ಸಭಾಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ.
ಇನ್ನು ಪಕ್ಷಗಳ ಬಲಾಬಲ ನೋಡುವುದಾದರೆ ಒಟ್ಟು 75 ಸ್ಥಾನಗಳನ್ನು ಒಳಗೊಂಡಿರುವ ವಿಧಾನಪರಿಷತ್ನಲ್ಲಿ ಆಡಳಿತರೂಢ ಬಿಜೆಪಿ 39, ವಿರೋಧ ಪಕ್ಷ ಕಾಂಗ್ರೆಸ್ 26 ಹಾಗೂ ಜೆಡಿಎಸ್ 8 ವಿಧಾನಪರಿಷತ್ ಸ್ಥಾನಗಳನ್ನು ಹೊಂದಿದೆ. ಇನ್ನು ಪಕ್ಷೇತರ 1 ಇದೆ. ಸಭಾಪತಿಯಾಗಲು 38 ಮತಗಳ ಪಡೆಯಬೇಕಾಗುತ್ತದೆ.
(ಓದಿ: 156 ಸೀಟು ಗೆದ್ದು ಗುಜರಾತ್‌ನಲ್ಲಿ ಬಿಜೆಪಿ ದಾಖಲೆಯ ಜಯಭೇರಿ: 'ಕೈ'ಗೆ ಪ್ರತಿಪಕ್ಷ ಸ್ಥಾನವೂ ಇಲ್ಲ! )