ಬೆಂಗಳೂರು: ವಿಧಾನ ಪರಿಷತ್ನಲ್ಲಿ ಸಂಖ್ಯಾಬಲದ ಕೊರತೆ ಜೊತೆಗೆ ಏಕಾಂಗಿಯಾಗಿರುವ ಹಿನ್ನೆಲೆ ಉಪಸಭಾಪತಿ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಹಿಂದೆ ಸಾಥ್ ಕೊಟ್ಟಿದ್ದ ಜೆಡಿಎಸ್ ಈ ಸಾರಿ ಬಿಜೆಪಿ ಕೈಹಿಡಿಯುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆ ಕಾಂಗ್ರೆಸ್ ತಮ್ಮ ಅಭ್ಯರ್ಥಿಗೆ ಹಿನ್ನೆಡೆಯಾಗುವುದು ಖಚಿತ ಎಂದು ಅರಿತಿದ್ದು, ತಟಸ್ಥವಾಗಿರಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್ನಲ್ಲಿ ಸದಸ್ಯರ ಸಂಖ್ಯಾಬಲ ಪಕ್ಷವಾರು ಗಮನಿಸಿದಾಗ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಒಟ್ಟು 75 ಸದಸ್ಯರ ಬಲದ ಪರಿಷತ್ನಲ್ಲಿ ಪಕ್ಷೇತರ ಸದಸ್ಯರೊಬ್ಬರ ಬೆಂಬಲ ಸೇರಿ ಒಟ್ಟು 32 ಸದಸ್ಯರ ಬಲವನ್ನು ಬಿಜೆಪಿ ಹೊಂದಿದೆ. 2ನೇ ದೊಡ್ಡ ಪಕ್ಷ ಕಾಂಗ್ರೆಸ್. ಇದು 29 ಸದಸ್ಯರ ಬಲ ಹೊಂದಿದೆ. ಜೆಡಿಎಸ್ 13 ಸದಸ್ಯರನ್ನು ಒಳಗೊಂಡಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಉಪಸಭಾಪತಿ ಧರ್ಮೇಗೌಡ ಜೆಡಿಎಸ್ ಸದಸ್ಯರಾಗಿದ್ದರು. ಇವರ ನಿಧನದಿಂದ ತೆರವಾದ ಸ್ಥಾನವನ್ನು ಕೂಡ ವಿಧಾನಸಭೆ ಸದಸ್ಯರ ಸಂಖ್ಯಾಬಲ ಆಧರಿಸಿ ಬಿಜೆಪಿ ಗೆದ್ದುಕೊಳ್ಳಲಿದೆ.
ಸದ್ಯ 74 ಸದಸ್ಯರನ್ನು ಹೊಂದಿರುವ ಪರಿಷತ್ನಲ್ಲಿ ಬಹುಮತ ಸಾಬೀತುಪಡಿಸಲು 38 ಸದಸ್ಯರ ಬಲದ ಅಗತ್ಯವಿದೆ. ಬಿಜೆಪಿಯ 32 ಸದಸ್ಯರ ಜತೆ ಜೆಡಿಎಸ್ನ 13 ಸದಸ್ಯರು ಬೆಂಬಲ ಸೂಚಿಸಿದರೆ ಅಲ್ಲಿಗೆ 45 ಸದಸ್ಯರ ಬಲದೊಂದಿಗೆ ಉಪಸಭಾಪತಿ ಆಯ್ಕೆ ಆಗಲಿದೆ.
ಈಗಾಗಲೇ ಪರಿಷತ್ನಲ್ಲಿ ಸಂಪೂರ್ಣ ಬಲ ಸಿಗುವವರೆಗೂ ಸಭಾಪತಿ ಸ್ಥಾನವನ್ನು ಅಲಂಕರಿಸದಿರಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆ ಉಪ ಸಭಾಪತಿ ಸ್ಥಾನಕ್ಕೆ ತಮ್ಮ ಅಭ್ಯರ್ಥಿ ಕಣಕ್ಕಿಳಿಸಿ ಜೆಡಿಎಸ್ ಬೆಂಬಲದೊಂದಿಗೆ ಗೆದ್ದು, ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡುವ ನಿರ್ಧಾರ ಕೂಡ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸೋಲು ಖಚಿತ