ಬೆಂಗಳೂರು :ಭ್ರಷ್ಟಾಚಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಭ್ರಷ್ಟಾಚಾರ ಎಂಬುದು ಕಡಿಮೆ ಅಪಾಯದ ಹೆಚ್ಚು ಲಾಭದ ವ್ಯಾಪಾರವಾಗಿ ರೂಪುಗೊಂಡಿದೆ. ಹೀಗಾಗಿ, ಭ್ರಷ್ಟಾಚಾರವನ್ನು ನಿಯಂತ್ರಿಸಲು ಕಾನೂನುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿ ಭ್ರಷ್ಟಚಾರ ರೂಪುಗೊಂಡಿದೆ. ನೆಲೆದ ಕಾನೂನು, ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುತ್ತಿದೆ. ಭ್ರಷ್ಟ ವ್ಯಕ್ತಿಗಳು ಕಾನೂನು ವ್ಯವಸ್ಥೆಯ ಲೋಪಗಳ ಪ್ರಯೋಜನ ಪಡೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಭ್ರಷ್ಟಆಚಾರ ಕಡಿಮೆ ಅಪಾಯದ ಹೆಚ್ಚು ಲಾಭದ ವ್ಯಾಪಾರವಾಗಿದೆ.
ಭ್ರಷ್ಟಾಚಾರ ಜನರಲ್ಲಿ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನು ಅಳಿಸಿ ಹಾಕುತ್ತದೆ. ದೇಶವನ್ನು ಭ್ರಷ್ಟಚಾರದಿಂದ ಮುಕ್ತಗೊಳಿಸಲು ಉತ್ತಮ ಕಾನೂನುಗಳಷ್ಟೇ ಸಾಕಾಗುವುದಿಲ್ಲ. ಆ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಲಂಚಕ್ಕೆ ಬೇಡಿಕೆ ಇಡುವುದಷ್ಟೇ ಅಲ್ಲ, ಲಂಚ ಕೊಡುವುದೂ ಅಪರಾಧ ಎಂದು ಹೈಕೋರ್ಟ್ ವ್ಯವಸ್ಥೆ ಲೋಪಗಳನ್ನು ಗಂಭೀರವಾಗಿ ಟೀಕಿಸಿದೆ.
ಇದೇ ವೇಳೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನುದಾನ ಪಡೆಯುತ್ತಾ ಸರ್ಕಾರಿ ಕೆಲಸ ಹಾಗೂ ನಾಗರಿಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ನೌಕರನೂ ಸರ್ಕಾರಿ ಉದ್ಯೋಗಿಯಾಗಿಯೇ ಪರಿಗಣಿಸಲ್ಪಡುತ್ತಾನೆ. ಆದ್ದರಿಂದ ಆತನನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ (ಪಿಸಿ ಆ್ಯಕ್ಟ್) ಅಡಿ ಅಪರಾಧ ಕೃತ್ಯಗಳ ಸಂಬಂಧ ಅಭಿಯೋಜನೆಗೆ ಒಳಪಡಿಸಲು ಅವಕಾಶವಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು 2021ರ ಮಾರ್ಚ್ 8ರಂದು ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ. ಕೃಷ್ಣೇಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ಹಾಗೂ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಕೃಷ್ಣೇಗೌಡ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.