ಕರ್ನಾಟಕ

karnataka

ETV Bharat / state

ರಾಜ್ಯದ ಇ- ಟೆಂಡರ್ ಪೋರ್ಟಲ್​ಗೆ ಕನ್ನ; ತನಿಖೆಗೆ ಜೆಡಿಎಸ್ ರಾಷ್ಟ್ರೀಯ ವಕ್ತಾರ ಆಗ್ರಹ - ಬೆಂಗಳೂರು

ಸರ್ಕಾರಿ ಇಲಾಖೆಯಲ್ಲಿ ಟೆಂಡರ್ ವ್ಯವಸ್ಥೆಯಲ್ಲಿ ಪ್ರಭಾವ, ಭ್ರಷ್ಟಾಚಾರ, ಬಲ ಪ್ರಯೋಗ, ಅಧಿಕಾರ ದುರುಪಯೋಗ, ನಿಧಾನಗತಿ, ಅಕ್ರಮ ದಂಧೆ ನಿಲ್ಲಿಸುವ ಮೂಲ ಉದ್ದೇಶ ಹೊಂದಲಾಗಿತ್ತು. ಆದರೆ ಇ-ಆಡಳಿತ ಇಲಾಖೆಯ ಈ ಪೋರ್ಟಲ್​ಗೆ ಕನ್ನ ಹಾಗಿದ್ದಾರೆ. ಇದು ಈ ರಾಜ್ಯದ ದುರಂತ ಮತ್ತು ಇ-ಆಡಳಿತಕ್ಕೆ ಕಪ್ಪು ಚುಕ್ಕೆ ಎಂದು ಜೆಡಿಎಸ್​ನ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.

ರಮೇಶ್ ಬಾಬು

By

Published : Sep 10, 2019, 9:01 AM IST

ಬೆಂಗಳೂರು: ರಾಜ್ಯದಲ್ಲಿ ಪಾರದರ್ಶಕ ಟೆಂಡರ್ ನಡೆಸುವ ಕಾರಣಕ್ಕಾಗಿ ಇ-ಟೆಂಡರ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇ- ಟೆಂಡರ್ ಪೋರ್ಟಲ್​ಗೆ ಕನ್ನ ಹಾಕಿರುವ ನೆಪ ಒಡ್ಡಿ ಇ-ಆಡಳಿತ ಇಲಾಖೆಯೇ ಭರ್ಜರಿ ವ್ಯಾಪಾರಕ್ಕೆ ನಿಂತಿದೆ ಎಂದು ಜೆಡಿಎಸ್​ನ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.

ಸರ್ಕಾರಿ ಇಲಾಖೆಯಲ್ಲಿ ಟೆಂಡರ್ ವ್ಯವಸ್ಥೆಯಲ್ಲಿ ಪ್ರಭಾವ, ಭ್ರಷ್ಟಾಚಾರ, ಬಲ ಪ್ರಯೋಗ, ಅಧಿಕಾರ ದುರುಪಯೋಗ, ನಿಧಾನಗತಿ, ಅಕ್ರಮ ದಂಧೆ ನಿಲ್ಲಿಸುವ ಮೂಲ ಉದ್ದೇಶ ಹೊಂದಲಾಗಿತ್ತು. ಆದರೆ ಇ-ಆಡಳಿತ ಇಲಾಖೆಯೇ ಈ ಪೋರ್ಟಲ್​ಗೆ ಕನ್ನ ಹಾಕಿದೆ. ಇದು ಈ ರಾಜ್ಯದ ದುರಂತ ಮತ್ತು ಇ-ಆಡಳಿತಕ್ಕೆ ಕಪ್ಪು ಚುಕ್ಕೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಪೋರ್ಟಲ್​ಗೆ ಕನ್ನ ಹಾಕಿರುವ ಸುದ್ದಿ ಹರಡಲಾಯಿತು. ಇದು ನಿಜವಾಗಿದ್ದರೆ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಲು ಏನು ತೊಂದರೆ ಇತ್ತು. ಕನ್ನ ಹಾಕಿದ್ದರೆ ಯಾರು ಮತ್ತು ಏಕೆ ಎಂದು ಸರ್ಕಾರ ಸಾರ್ವಜನಿಕವಾಗಿ ಉತ್ತರಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇಲಾಖೆಯ ಸಿಬ್ಬಂದಿ ಪೋರ್ಟಲ್​ಗೆ ಕನ್ನ ಹಾಕಿರುವ ನಾಟಕದಲ್ಲಿ ಮತ್ತು ಮೋಸದಲ್ಲಿ ಶಾಮಿಲಾಗಿದ್ದಾರೆ. ಇ-ಟೆಂಡರ್​ನಲ್ಲಿ ಖದೀಮರಿಗೆ ಅನುಕೂಲ ಮಾಡಲು ಮತ್ತು ಇ ಟೆಂಡರ್ ಹಣವನ್ನು ಬಿಡ್ ದಾರರಿಗೆ ವಾಪಸ್​​ ನೀಡಲು ದಂಧೆ ಪ್ರಾರಂಭಿಸಿದ್ದಾರೆ. ಸರ್ಕಾರ ಎಲ್ಲ ಅವ್ಯವಹಾರ ತನಿಖೆಗೆ ಆದೇಶ ನೀಡಿದರೆ ಸತ್ಯ ಆಚೆಗೆ ಬರಲಿದೆ. ಜನಸಾಮಾನ್ಯರು ಇ- ಪೋರ್ಟಲ್ ಖನ್ನ ಆರೋಪದಲ್ಲಿ ರಾಜ್ಯ ಸರ್ಕಾರದ ತಟಸ್ಥ ನೀತಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ. ರಾಜ್ಯದ ಇ-ಆಡಳಿತದಲ್ಲಿ ಮೊದಲ ಬಾರಿಗೆ ಟೆಂಡರ್ ಪೋರ್ಟಲ್ ಕನ್ನ ಆರೋಪ ಕೇಳಿಬಂದಿದೆ. ಸರ್ಕಾರ ಇದುವರೆಗೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯಾವ ಅಧಿಕಾರಿಯ ಮೇಲೂ ಕ್ರಮ ತೆಗೆದುಕೊಂಡಿಲ್ಲ. ಇದು ಬಹಳಷ್ಟು ಅನುಮಾನಗಳಿಗೆ ಅವಕಾಶ ನೀಡಿದೆ ಎಂದು ದೂರಿದ್ದಾರೆ.

ಪೋರ್ಟಲ್​ಗೆ ಕನ್ನ ಹಾಕಿದ್ದರೆ ಈಗಲೂ ಇ-ಟೆಂಡರ್ ಮಾಡಲು ಹೇಗೆ ಸಾಧ್ಯ. ತಮಗೆ ಬೇಕಾದ ಇ- ಟೆಂಡರ್ ಈಗಲೂ ನಡೆಯುತ್ತಿದೆ. ಕಮೀಷನ್ ನೀಡಿದವರಿಗೆ ಇಎಂಡಿ ಹಣ ವಾಪಸ್​​ ನೀಡಲಾಗುತ್ತಿದೆ. ಇದರಿಂದ ಕೆಲವು ಇಲಾಖಾ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬರುತ್ತಿದೆ. ಈ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತಿನಲ್ಲಿ ಇಟ್ಟು ತನಿಖೆಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ಇ-ಟೆಂಡರ್ ನಲ್ಲಿ ಇ ಎಂ ಡಿ ಪಾವತಿ ಮಾಡಿ ಒಂದು ತಿಂಗಳಾದರೂ ವಾಪಸ್​​​ ನೀಡದ ಗುತ್ತಿಗೆದಾರರಿಗೆ ಮಾಸಿಕ ಶೇ. 2 ರ ಬಡ್ಡಿಯನ್ನು ನೀಡಿ ವಾಪಸ್​​​ ಮಾಡಬೇಕು. ಈ ನಷ್ಟವನ್ನು ಸಂಬಂಧಪಟ್ಟ ಇಲಾಖಾ ನೌಕರರಿಂದ ವಸೂಲಿ ಮಾಡಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ABOUT THE AUTHOR

...view details