ಬೆಂಗಳೂರು :ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ವಿಧಾನಸೌಧದಲ್ಲಿನ ಸಿಎಂ ಅಧಿಕೃತ ಕಚೇರಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕೆಟ್ಗಳ ಹೆಸರಿನಲ್ಲಿ ಸುಮಾರು 200.62 ಕೋಟಿ ರೂ. ಹೆಚ್ಚು ಹಣ ದುಂದು ವೆಚ್ಚ ಮಾಡಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ತಿಂಡಿ, ಕಾಫಿಗೆ 200 ಕೋಟಿ ರೂ. ದುಂದು ವೆಚ್ಚ ಆರೋಪ :ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ 2013-14 ರಿಂದ 2017-18 ರವರೆಗಿನ 5 ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ/ ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ ಕಾಫೀ - ಟೀ - ತಿಂಡಿ - ಉಪಹಾರ ಪೂರೈಕೆ ಕಾರ್ಯಗಳಿಗೆ ಎಂದು ವೆಚ್ಛ ಮಾಡಿರುವ ಒಟ್ಟು ಮೊತ್ತ 200,62,93,027 ರೂಪಾಯಿ. ಈ ಬಗ್ಗೆ RTI ಕಾಯ್ದೆಯಡಿ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಅಧಿಕೃತ ದಾಖಲೆಗಳಿಂದ ಮಾಹಿತಿ ಬಯಲಾಗಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಸರ್ಕಾರದಿಂದ ಭ್ರಷ್ಟಾಚಾರ ಆರೋಪ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ “ರಾಜ್ಯ ಅತಿಥಿ ಗೃಹಗಳ ವಿಭಾಗ”ದ ಅಧಿಕಾರಿಗಳು ನೀಡಿರುವ ಅಧಿಕೃತ ದಾಖಲೆಗಳು ಹೇಳುವಂತೆ, ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಮತ್ತು ಅತಿಥಿ - ಗಣ್ಯರ ಉಪಚಾರಗಳಿಗೆಂದು ವೆಚ್ಛ ಮಾಡಿರುವ ವರ್ಷಾವಾರು ವಿವರ ಹೀಗಿದೆ. 2013-14ರಲ್ಲಿ 36,03,03,078, 2014-15ರಲ್ಲಿ 38,26,68,575, 2015-16ರಲ್ಲಿ 36,66,19,743, 2016-17ರಲ್ಲಿ 44,73,92,077, 2017-18ರಲ್ಲಿ 44,93,09,554 ರೂ. ನಂತೆ ಒಟ್ಟು 200,62,93,027 ರೂ. ಹಗರಣವಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ದಿನಕ್ಕೆ 11 ಲಕ್ಷ ರೂ ವೆಚ್ಚವಾಗಿದೆ ಎಂದು ದೂರು :5 ವರ್ಷಗಳ ಅವಧಿ ಎಂದರೆ ಒಟ್ಟು 1,825 ದಿನಗಳು. ಭಾನುವಾರ, ಎರಡನೇ ಶನಿವಾರ ಮತ್ತು ಸರ್ಕಾರೀ ರಜಾ ದಿನಗಳು ಪ್ರತೀ ವರ್ಷಕ್ಕೆ 82 ದಿನಗಳಂತೆ, ಐದು ವರ್ಷಗಳಿಗೆ ಒಟ್ಟು 410 ದಿನಗಳು ಸರ್ಕಾರೀ ರಜಾ ದಿನಗಳು ಆಗುತ್ತವೆ. ಆದರೂ, ಸಿದ್ಧರಾಮಯ್ಯ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯು ಒಂದು ದಿನವೂ ರಜೆಯಿಲ್ಲದೇ ಎಲ್ಲ ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ಎಲ್ಲ ಸರ್ಕಾರಿ ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಿದೆ ಎಂದು ಭಾವಿಸಿದರೂ 5 ವರ್ಷಗಳ ಅವಧಿಯ ಒಟ್ಟು 1,825 ದಿನಗಳಲ್ಲಿ ಅಂದಿನ ಸಿದ್ಧರಾಮಯ್ಯ ಅಧಿಕೃತ ಕಚೇರಿಯ ಸಭೆಗಳಲ್ಲಿ ಮತ್ತು ಅತಿಥಿ ಗಣ್ಯರ ಉಪಚಾರಗಳ ಹೆಸರಿನಲ್ಲಿ ಕಾಫೀ - ತಿಂಡಿ - ಸ್ನಾಕ್ಸ್ - ಉಪಹಾರಗಳಿಗೆಂದು ಪ್ರತೀ ದಿನವೊಂದಕ್ಕೆ ಮಾಡಿರುವ ಸರಾಸರಿ ವೆಚ್ಛ 10,99,339 ಆಗಿದೆ ಎಂದು ಆರೋಪಿಸಿದರು.