ಕರ್ನಾಟಕ

karnataka

ETV Bharat / state

ಕೋವಿಡ್ ವೇಳೆ ಭ್ರಷ್ಟಾಚಾರ, ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆಗೆ ಸೂಚನೆ: ಸಚಿವ ಗುಂಡೂರಾವ್ - ಆರೋಗ್ಯ ಇಲಾಖೆಯಲ್ಲಿ ಅಕ್ರಮದ ಆರೋಪ

ಬೆಂಗಳೂರು ವಿಧಾನಸೌಧದಲ್ಲಿ ಇಂದು ನೂತನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆಯ ಎಲ್ಲ ವಿಭಾಗದ ಅಧಿಕಾರಿಗಳೊಂದಿಗೆ ಮೂರೂವರೆ ಗಂಟೆಗಳ ಕಾಲ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Health Minister Dinesh Gundu Rao spoke to reporters.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರೊಂದಿಗೆ ಮಾತನಾಡಿದರು.

By

Published : May 30, 2023, 6:28 PM IST

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಹಾಗೂ ಕೋವಿಡ್ ವೇಳೆ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳಿಗೆ ಮತ್ತೆ ಮರುಜೀವ ಬಂದಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ಇಂದು ನೂತನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆಯ ಎಲ್ಲ ವಿಭಾಗದ ಅಧಿಕಾರಿಗಳೊಂದಿಗೆ ಮೂರುವರೆ ಗಂಟೆ ಕಾಲ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಚಾಮರಾಜ ನಗರದ ಆಕ್ಸಿಜನ್ ದುರಂತದ ಬಗ್ಗೆ ಪೂರ್ಣ ತನಿಖೆ ಆಗಿಲ್ಲ. ಹಾಗಾಗಿ, ಮರು ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

ದುರದೃಷ್ಟವಶಾತ್ ಆಕ್ಸಿಜನ್ ದುರಂತಕ್ಕೆ ಯಾರು ಕಾರಣ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹಾಗಾಗಿ ಈ ದುರಂತಕ್ಕೆ ಯಾರಿಂದ ಲೋಪದೋಷ ಆಗಿದೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನ್ಯಾಯಾಲಯದಿಂದ ಪ್ರಕರಣದ ಕುರಿತು ತೀರ್ಪು ಬಂದಿದೆ. ಆದರೆ, ಇಲಾಖೆಯಿಂದ ಸರಿಯಾದ ತನಿಖೆ ನಡೆದಿಲ್ಲ. ಹೀಗಾಗಿ, ಮತ್ತೆ ತನಿಖೆ ನಡೆಸಲು ಸೂಚಿಸಿರುವುದಾಗಿ ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಅಕ್ರಮದ ಆರೋಪ, ಪರಿಶೀಲಿಸಿ ತನಿಖೆಗೆ ಆದೇಶ:ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಕೇಳಿಬಂದಿರುವ ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸಲು ಪರಿಶೀಲನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸಲು ಚಿಂತನೆ ನಡೆಸಲಾಗುವುದು. ಮೊದಲು ಮಾಹಿತಿ ಸಂಗ್ರಹ ಮಾಡುತ್ತೇನೆ. ಅಕ್ರಮ ನಡೆದಿರುವುದು ಮನದಟ್ಟಾದರೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಲೋಪ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ವೈದ್ಯರು, ಸಿಬ್ಬಂದಿ ಭರ್ತಿಗೆ ಕ್ರಮ : ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ, ತಾಂತ್ರಿಕ ಪರಿಣಿತರು ಕೊರತೆ ಇದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ನಮ್ಮ ಪ್ರಣಾಳಿಕೆಯಲ್ಲೂ ಹೇಳಿದ್ದೇವೆ. ಇನ್ನು ಶುಚಿ ಯೋಜನೆ ಕಾರ್ಯಗತವಾಗಿಲ್ಲ, ನಮ್ಮ ಇಲಾಖೆ ಮಾಡಬೇಕೋ ಅಥವಾ ಶಿಕ್ಷಣ ಇಲಾಖೆ ಮಾಡಬೇಕೋ ಎಂಬ ಬಗ್ಗೆ ಗೊಂದಲ ಇದೆ. ಇದನ್ನು ಪರಿಶೀಲನೆ ಮಾಡಲಾಗುತ್ತದೆ ಎಂದರು.

ಇದು ಪ್ರಥಮ ಸಭೆ. ದೊಡ್ಡ ಇಲಾಖೆ, ಅನೇಕ ಯೋಜನೆಗಳು ಆರೋಗ್ಯ ಇಲಾಖೆಯಲ್ಲಿ ಬರುತ್ತದೆ ಎಂಬುದನ್ನು ಗಮನಿಸಿದ್ದೇನೆ. ಎಲ್ಲವನ್ನೂ ಅವಲೋಕನ ಮಾಡಿದ್ದೇನೆ. ಎರಡು ಮೂರು ವರ್ಷಗಳಿಂದ ಹೇಗೆ ಕೆಲಸ ಮಾಡಿದೆ. ರಾಷ್ಟ್ರಮಟ್ಟದಲ್ಲಿ ನಾವು ಎಲ್ಲಿ ಇದ್ದೇವೆ . ಅಕ್ಕ ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಾವು ಎಲ್ಲಿ ಇದ್ದೇವೆ ಎಂದು ನೋಡಬೇಕು. ಇನ್ನು ಇಲಾಖೆಯಲ್ಲಿ ಸುಧಾರಣೆ ತರಲು ಚರ್ಚೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿ ಕೆಲಸ ಆಗಲು ಆನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಪಿಪಿ ಕಿಟ್ ಹಗರಣ ಒಂದೇ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ. ಎಲ್ಲ ವಿಷಯಗಳ ಬಗ್ಗೆಯೂ ಚರ್ಚೆ ಮಾಡಿದ್ದೇನೆ. 108 ಆಂಬ್ಯುಲೆನ್ಸ್ ಬಗ್ಗೆಯೂ ಚರ್ಚೆ ಮಾಡಲಾಗಿದೆ. 108 ಆಂಬ್ಯುಲೆನ್ಸ್ ಬಗ್ಗೆ ಮತ್ತೊಂದು ಸಭೆ ಮಾಡಲು ಅಧಿಕಾರಿಗಳಿಗೆ ಹೇಳಿದ್ದೇನೆ. ಆನೇಕ ಯೋಜನೆಗಳು ಪೂರ್ಣಗೊಳಿಸಿಲ್ಲ. ಹಾಗಾಗಿ, ಎಲ್ಲ ಮಾಹಿತಿ ಪಡೆದು ನಂತರ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂಬುದು ನಿರ್ಧಾರ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.

ಆರೋಗ್ಯ ವಿಮೆ ಲೋಪ ದೋಷ ಚರ್ಚೆ:ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಪಡೆದು ಚಿಕಿತ್ಸೆ ಬಗ್ಗೆ ಕೇಳಿದಾಗ, ಈ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಐದು ವರ್ಷದಲ್ಲಿ ಜನರಿಗೆ ಮಾಡಬೇಕಾದ ಗುರಿ ಇಟ್ಟುಕೊಳ್ಳಲಾಗಿದೆ. ಆರೋಗ್ಯ ವಿಮೆ ಜನರಿಗೆ ಸಂಪೂರ್ಣವಾಗಿ ಸಿಗುತ್ತಿಲ್ಲ. ಯೋಜನೆ ಇದ್ದರೂ, ಸಾರ್ವಜನಿಕರಿಗೆ ಸಂಪೂರ್ಣವಾಗಿ ಸಿಗುತ್ತಿಲ್ಲ. ಸಾರ್ವತ್ರಿಕವಾದ ಆರೋಗ್ಯ ವಿಮೆ ಸಿಗುವಂತೆ ಮಾಡಬೇಕು. ಅದರ ಲೋಪ ದೋಷಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಇನ್ನು ಬಡ ಕುಟುಂಬಗಳಿಗೆ ಆರೋಗ್ಯ ವಿಮೆ ಸಿಗಬೇಕು ಎಂದು ಹೇಳಿದರು.

ಆಕ್ಸಿಜನ್ ದುರಂತವೇನು?: ಕೋವಿಡ್ 2ನೇ ಅಲೆ ತೀವ್ರವಾಗಿದ್ದ ವೇಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಂಗ್ರಹದ ಅಸಮರ್ಪಕ ನಿರ್ವಹಣೆಯಿಂದ 36 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದರು. ಆಕ್ಸಿಜನ್​ ದುರಂತಕ್ಕೆ ಅಂದಿನ ಜಿಲ್ಲಾಧಿಕಾರಿ ನಿರ್ಲಕ್ಷ್ಯವೇ ಕಾರಣ ಎಂದು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಹೇಳಿತು. ಆದರೆ, ಹಿಂದಿನ ಸರ್ಕಾರ ದುರಂತಕ್ಕೆ ಯಾರನ್ನೂ ಹೊಣೆ ಮಾಡಿರಲಿಲ್ಲ. ಘಟನೆ ನಡೆದು ವರ್ಷವೇ ಕಳೆದರೂ ನ್ಯಾಯಾಂಗ ತನಿಖಾ ವರದಿ ಇನ್ನೂ ಬಹಿರಂಗಪಡಿಸಿಲ್ಲ.
ಇದನ್ನೂಓದಿ:ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಹುಚ್ಚು ಹೊಳೆಯಲ್ಲಿ ಎಲ್ಲವೂ ಕೊಚ್ಚಿಹೋದವು: ಜಿ.ಟಿ.ದೇವೇಗೌಡ

ABOUT THE AUTHOR

...view details