ಕರ್ನಾಟಕ

karnataka

ETV Bharat / state

ಭ್ರಷ್ಟಾಚಾರ ಆರೋಪ: ನಿವೃತ್ತ ಸಿಎಸ್ ಸೇರಿ 6 ಅಧಿಕಾರಿಗಳ ವಿರುದ್ಧ ತನಿಖೆಗೆ ಕೋರ್ಟ್ ಆದೇಶ - ನಿವೃತ್ತ ಸಿಎಸ್​ ವಿರುದ್ಧ ಭ್ರಷ್ಟಾಚಾರ ಆರೋಪ

ರಾಜ್ಯದ ಬೊಕ್ಕಸಕ್ಕೆ 269 ಕೋಟಿ ರೂಪಾಯಿ ನಷ್ಟ ಉಂಟುಮಾಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಸೇರಿದಂತೆ 6 ಜನ ಅಧಿಕಾರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶಿಸಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌
ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌

By

Published : Apr 26, 2022, 3:40 PM IST

ಬೆಂಗಳೂರು: ಅಕ್ರಮವಾಗಿ ಬ್ಯಾಂಕ್‌ ಖಾತೆಗಳನ್ನು ತೆರೆದು ರಾಜ್ಯದ ಬೊಕ್ಕಸಕ್ಕೆ 269 ಕೋಟಿ ರೂಪಾಯಿ ನಷ್ಟ ಉಂಟುಮಾಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಸೇರಿದಂತೆ 6 ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹದಳಕ್ಕೆ ಹೈಕೋರ್ಟ್ ಆದೇಶಿಸಿದೆ. ಅಕ್ರಮದ ತನಿಖೆ ಕೋರಿ ಕೋಲಾರದ ಮಾಸ್ತಿ ಲೇಔಟ್‌ನ ಸಾಮಾಜಿಕ ಕಾರ್ಯಕರ್ತ ಎಸ್‌.ನಾರಾಯಣಸ್ವಾಮಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ಲಕ್ಷ್ಮಿನಾರಾಯಣ ಭಟ್‌ ಈ ಆದೇಶ ಹೊರಡಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿಗಳಾದ ಐಎಎಸ್‌ ಅಧಿಕಾರಿ ಅಮಿತಾ ಪ್ರಸಾದ್, ಡಾ. ಇ.ವಿ ರಮಣರೆಡ್ಡಿ, ಟಿ.ಎಂ ವಿಜಯಭಾಸ್ಕರ್‌ (ನಿವೃತ್ತ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ. ಬೋರೇಗೌಡ, ಗ್ರಾಮೀಣ ನೀರು ಸರಬರಾಜು ವಿಭಾಗದ ಉಪ ಕಾರ್ಯದರ್ಶಿ ರಾಮಕೃಷ್ಣ, ಅಂದಿನ ಸಿಂಡಿಕೇಟ್‌ ಬ್ಯಾಂಕ್‌ (ಈಗ ಕೆನರಾ ಬ್ಯಾಂಕ್‌ ಜೊತೆ ವಿಲೀನವಾಗಿದೆ) ಮ್ಯಾನೇಜರ್ ಸೀಲಂ ಗಿರಿ ವಿರುದ್ಧ ತನಿಖೆ ನಡೆಸಬೇಕು. ಡಿವೈಎಸ್ಪಿ ಶ್ರೇಣಿಗಿಂತ ಮೇಲಿನ ಅಧಿಕಾರಿ ತನಿಖೆ ನಡೆಸಿ 4 ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2009–10ರಿಂದ 2014–15ರ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ (ಆರ್‌ಡಿಪಿಆರ್‌) ಹಿಂದಿನ ಮೂವರು ಪ್ರಧಾನ ಕಾರ್ಯದರ್ಶಿಗಳು ಇತರೆ ಅಧಿಕಾರಿಗಳು ಮತ್ತು ಬ್ಯಾಂಕ್ ಮ್ಯಾನೇಜರ್ ಜತೆ ಸೇರಿ ಅಕ್ರಮವಾಗಿ ಬ್ಯಾಂಕ್ ಖಾತೆಗಳನ್ನು ತೆರೆದು ರಾಜ್ಯ ಬೊಕ್ಕಸದ 3405.21 ಕೋಟಿ ಮೊತ್ತವನ್ನು ದುರ್ವಿನಿಯೋಗ ಮಾಡಿದ್ದಾರೆ. ಈ ಅಕ್ರಮ ಲೆಕ್ಕ ಪರಿಶೋಧನೆ ವೇಳೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಸರ್ಕಾರದ ಬೊಕ್ಕಸಕ್ಕೆ 269 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಅಲ್ಲದೇ, ಆರೋಪಿತರ ವಿರುದ್ಧ ತನಿಖೆ ನಡೆಸುವಂತೆ ಕೋರಿ ಎಸಿಬಿಗೆ 2019ರ ಡಿ.26ರಂದು ದೂರು ಸಲ್ಲಿಸಿದ್ದರು. ಎಸಿಬಿ ದೂರು ಪರಿಗಣಿಸದ ಹಿನ್ನೆಲೆಯಲ್ಲಿ ಆರೋಪಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ–1988ರ ಸೆಕ್ಷನ್ 13(1), 13(2) ಮತ್ತು ಐಪಿಸಿ ಸೆಕ್ಷನ್ 465, 467, 468 ಮತ್ತು 471ರ ಅಡಿ ತನಿಖೆಗೆ ಆದೇಶಿಸುವಂತೆ ಕೋರಿ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು.

ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ: ಮತ್ತೋರ್ವ ಅಭ್ಯರ್ಥಿ ಬಂಧಿಸಿದ ಸಿಐಡಿ

For All Latest Updates

ABOUT THE AUTHOR

...view details