ಬೆಂಗಳೂರು:1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ 2016ರಲ್ಲಿ ನೀಡಿರುವ ನ್ಯಾಯಾಲಯದ ಆದೇಶ ಪಾಲನೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ, ಇಲ್ಲವೇ ನ್ಯಾಯಾಂಗ ನಿಂದನೆ ಎದುರಿಸಲು ಸಿದ್ದರಾಗಿ ಎಂದು ಹೈಕೋರ್ಟ್ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಎಚ್ಚರಿಕೆ ನೀಡಿದೆ.
ಹಾಗೆಯೇ ಲೋಪಗಳನ್ನು ಸರಿಪಡಿಸಲು ಶುಕ್ರವಾರ ಮಧ್ಯಾಹ್ನದವರೆಗೆ ಗಡುವು ನೀಡಿದೆ. ನ್ಯಾಯಾಲಯದ ಆದೇಶವನ್ನು ಕೆಪಿಎಸ್ಸಿ ಉದ್ದೇಶಪೂರ್ವಕವಾಗಿಯೇ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಅಭ್ಯರ್ಥಿಗಳಾದ ಚೆನ್ನಪ್ಪ, ಕೆ ರೂಪಶ್ರೀ ಮತ್ತಿತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕೋರ್ಟ್ ನೀಡಿದ ಸೂಚನೆಯಂತೆ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ನ್ಯಾಯಾಲಯದ ಎದುರು ಹಾಜರಿದ್ದರು. ಆಯೋಗದ ಪರ ವಾದಿಸಿದ ಹಿರಿಯ ವಕೀಲರು, ಹೈಕೋರ್ಟ್ 2016ರಲ್ಲಿ ನೀಡಿದ್ದ ನಿರ್ದೇಶನ ಗಳಲ್ಲಿಯೇ ಗೊಂದಲಗಳಿದ್ದವು ಎಂದರು. ವಾದ ಒಪ್ಪದ ಪೀಠ, ನ್ಯಾಯಾಲಯ ಹೇಳಿರುವುದು 91 ಉತ್ತರಪತ್ರಿಕೆಗಳನ್ನು ಪರಿಗಣಿಸಬೇಕು ಎಂದು. ಆದರೆ ಆಯೋಗ 91 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಗಣಿಸಿದೆ. ನಿಮಗೆ ಗೊಂದಲವಿದ್ದಿದ್ದರೆ ಸ್ಪಷ್ಟನೆ ಕೋರಬಹುದಿತ್ತು. ಆದರೆ ನಿಮಗೆ ಹೇಗೆ ಬೇಕೋ ಹಾಗೆ ಅದನ್ನು ಅರ್ಥೈಸಿಕೊಂಡು ಜಾರಿ ಮಾಡಿದ್ದೀರಿ. ಜೊತೆಗೆ ಆಯೋಗದ ಕಾರ್ಯದರ್ಶಿಯನ್ನು ಬಲಿಪಶು ಮಾಡುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿತು.
ಸುದೀರ್ಘ ವಾದ ಪ್ರತಿವಾದ ಆಲಿಸಿದ ಪೀಠ, ಶುಕ್ರವಾರ ಮಧ್ಯಾಹ್ನದ ಒಳಗೆ ಲೋಪಗಳನ್ನು ಸರಿಪಡಿಸಿ. ಇಲ್ಲದಿದ್ದರೆ ಈಗಾಗಲೇ ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆ ಸಾಬೀತಾಗಿರುವುದರಿಂದ ಆರೋಪವನ್ನು ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿ ವಿಚಾರಣೆ ಮುಂದೂಡಿದೆ.