ಬೆಂಗಳೂರು: ಪಿಒಪಿ ಗಣೇಶ ಮೂರ್ತಿಗಳನ್ನು ಜೆಸಿಬಿ ಮೂಲಕ ಮನಬಂದಂತೆ ತೆರವು ಮಾಡುತ್ತಿದ್ದು, ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ಬರುವ ರೀತಿ ವರ್ತಿಸುತ್ತಿದ್ದಾರೆ ಎಂದು ಗೋವಿಂದರಾಜನಗರ ಕಾರ್ಪೋರೇಟರ್ ಉಮೇಶ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಒಪಿ ಗಣೇಶ ಮೂರ್ತಿಗಳ ತೆರವು ವಿಚಾರ.. ಪಾಲಿಕೆ ಸಭೆಯಲ್ಲಿ ವಾಗ್ವಾದ - ಪಿಒಪಿ ಗಣೇಶ ಮೂರ್ತಿಗಳನ್ನು ಮನಬಂದಂತೆ ತೆರವು
ಗಣೇಶ ಹಬ್ಬಕ್ಕೆ ಕೆಲವೆ ದಿನಗಳು ಬಾಕಿ ಇದ್ದು, ಈಗ ಪಿಒಪಿ ಗಣೇಶ ಮೂರ್ತಿಗಳನ್ನು ತೆರವು ಮಾಡಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಗದ್ದಲ ಏರ್ಪಟ್ಟಿತ್ತು.
ಬಿಬಿಎಂಪಿ ಕೌನ್ಸಿಲ್ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಚರ್ಚೆಗೆ ಬಂದು ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರೋತ್ಸಾಹಿಸಬೇಕು ನಿಜ. ಆದರೆ, ಪಿಒಪಿ ಗಣೇಶ ಮೂರ್ತಿಗಳನ್ನು ಬೇಕಾಬಿಟ್ಟಿಯಾಗಿ ಬಿಸಾಕದೇ, ಗೌರವಯುತವಾಗಿ ತೆರವು ಮಾಡಲಿ. ಪರಿಸರದ ಬಗ್ಗೆ ನಮಗೂ ಕಾಳಜಿ ಇದೆ ಎಂದು ಉಮೇಶ್ ಶೆಟ್ಟಿ ಸಮರ್ಥಿಸಿಕೊಂಡರು.
ಬೇರೆ ಆಚರಣೆಗಳಲ್ಲಿ ಪ್ರಾಣಿಗಳ ವಧೆ ಆಗುತ್ತದೆ. ಮೋರಿಗಳಲ್ಲಿ ರಕ್ತ ಹರಿಯುತ್ತದೆ ಎಂಬ ಅವರ ಹೇಳಿಕೆಗೆ ಸಿಟ್ಟಿಗೆದ್ದ ರಿಜ್ವಾನ್ ಅರ್ಷದ್ ಗಣೇಶೋತ್ಸವದ ಬಗ್ಗೆ ಮಾತನಾಡಲಿ. ದೇವರ ಬಗ್ಗೆ ನಮಗೂ ಗೌರವವಿದೆ. ಆದರೆ ಬೇರೆ ಧರ್ಮದ ಹಬ್ಬದ ವಿಚಾರ ಅನಾವಶ್ಯಕವಾಗಿ ಎಳೆದು ತರಬಾರದು ಎಂದರು. ಈ ವೇಳೆ ಆಡಳಿತ ಪಕ್ಷದ ನಾಯಕ ವಾಜಿದ್ ಹಾಗೂ ಉಮೇಶ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆಯಿತು. ಹತ್ತು ನಿಮಿಷಕ್ಕೂ ಹೆಚ್ಚು ಕಾಲ ವಾಗ್ವಾದ ನಡೆದು ಕೊನೆಗೆ ಮೇಯರ್ ಗಂಗಾಂಬಿಕೆ ಸಭೆಯನ್ನು ಹತೋಟಿಗೆ ತಂದರು.