ಬೆಂಗಳೂರು: ಕಾರ್ಪೊರೇಟ್ ಸಂಸ್ಥೆಗಳು ಬದಲಾವಣೆಯ ಭಾಗವಾಗಬೇಕು. ಕೇವಲ ಮೂಲ ಸೌಕರ್ಯಗಳು ಮಾತ್ರವಲ್ಲ, ಸಂಸ್ಕೃತಿಯಲ್ಲಿ ಬದಲಾವಣೆ ತರಬೇಕು. ಬಡವರಿಗೆ ಅಗತ್ಯವಿರುವ ಸೌಲಭ್ಯಗಳು ದೊರಕಿದಾಗ ಸಂಸ್ಕೃತಿಯೂ ಬದಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಶುಕ್ರವಾರ ಉನ್ನತ ಶಿಕ್ಷಣ ಇಲಾಖೆ ಆಯೋಜಿಸಿದ್ದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಂಪನಿ ಹಾಗೂ ಸಂಸ್ಥೆಗಳು ದತ್ತು ಪಡೆಯುವ ಕಾಲೇಜುಗಳಲ್ಲಿ ಕೇವಲ ಹಣ ಮಾತ್ರವಲ್ಲದೆ ಸಮಯವನ್ನೂ ನೀಡಬೇಕು. ಕಾಲೇಜುಗಳು ನಮ್ಮದೇ ಎಂಬ ಭಾವನೆ ಇರಬೇಕು. ಆಗ ವ್ಯತ್ಯಾಸ ಕಾಣಲು ಸಾಧ್ಯ. ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆ ತಂದರೆ, ನಿಮ್ಮ ಬದುಕಿನಲ್ಲಿಯೂ ಬದಲಾವಣೆ ತರಲು ಸಾಧ್ಯ ಎಂದರು.
ಇದನ್ನೂ ಓದಿ:'ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಕರ್ನಾಟಕಕ್ಕೆ ಹೆಚ್ಚಿನ ಸಹಕಾರ'
ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯ ರಾಜ್ಯವಾಗಬೇಕು:ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯ ರಾಜ್ಯವಾಗಬೇಕು. ಸರ್ಕಾರಿ ಐಟಿಐಗಳನ್ನು ಟಾಟಾ ಸಂಸ್ಥೆಯ ಸಹಯೋಗದಲ್ಲಿ 4,800 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. 30 - 40 ಕೋಟಿ ರೂ.ಗಳನ್ನು ಐಟಿಐಗಳನ್ನು ಆಧುನೀಕರಣಗೊಳಿಸಲು ವೆಚ್ಚ ಮಾಡಲಾಗಿದೆ. ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದರು.
ಮುಂದಿನ 2-3 ವರ್ಷಗಳಲ್ಲಿ ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿಯಾಗಲಿದೆ. ಬೆಂಗಳೂರಿನ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನೊಂದಿಗೆ ಸಹಯೋಗ ಹೊಂದಲು ಸಂಪರ್ಕಿಸಲಾಗುತ್ತಿದೆ. ನಿಮ್ಮ ಅನುಭವ, ಸಂಪರ್ಕಗಳನ್ನು ಹಂಚಿಕೊಳ್ಳಬೇಕು. ಅತ್ಯುತ್ತಮ ಜ್ಞಾನ ಕರ್ನಾಟಕದಲ್ಲಿ ಲಭ್ಯವಾಗಬೇಕು ಎನ್ನುವುದು ನಮ್ಮ ಆಶಯ ಎಂದರು.