ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ರಾಜ್ಯದ ಕಾರಾಗೃಹಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಕುರಿತು ಪೀಪಲ್ಸ್ ಯುನಿಟಿ ಫಾರ್ ಸಿವಿಲ್ ಲಿಬರ್ಟೀಸ್ ಹಾಗೂ ಹ್ಯುಮನ್ ರೈಟ್ಸ್ ಫೋರಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಜೈಲುಗಳಲ್ಲಿನ ಕೈದಿಗಳ ದಟ್ಟಣೆ ಬಗ್ಗೆಯೂ ಮಾಹಿತಿ ಒದಗಿಸಬೇಕು ಮತ್ತು ರಿಮ್ಯಾಂಡ್ ಹೋಂ ಮತ್ತು ಚಿಲ್ಡ್ರನ್ಸ್ ಹೋಂಗಳಲ್ಲಿ ಕೋವಿಡ್-19 ಹರಡದಂತೆ ತಡೆಯಲು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಹೇಗೆ ಪಾಲಿಸಲಾಗುತ್ತಿದೆ ಎಂಬ ಬಗ್ಗೆ ವರದಿ ನೀಡಬೇಕು. ಅದೇ ರೀತಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ರಾಜ್ಯದಲ್ಲಿನ ಜೈಲುಗಳು ಹಾಗೂ ರಿಮ್ಯಾಂಡ್ ಹೋಂಗಳಿಗೆ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆಯೇ? ಒಂದು ವೇಳೆ ರಚಿಸಿದ್ದರೆ ಆ ಸಮಿತಿ ಈವರೆಗೆ ಏನೆಲ್ಲಾ ಕೆಲಸ ಮಾಡಿದೆ ಎಂಬ ಬಗ್ಗೆ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಉನ್ನತಾಧಿಕಾರ ಸಮಿತಿಯ ನಿರ್ದೇಶನದಂತೆ ಲಾಕ್‍ಡೌನ್ ಘೋಷಣೆಯಾದ ದಿನದಿಂದ ಇಲ್ಲಿವರೆಗೆ ರಾಜ್ಯದ ವಿವಿಧ ಜೈಲುಗಳಲ್ಲಿನ 707 ವಿಚಾರಣಾಧೀನ ಕೈದಿಗಳಿಗೆ ಜಾಮೀನು ನೀಡಲಾಗಿದೆ. ಅದೇ ರೀತಿ 405 ಕೈದಿಗಳಿಗೆ ಪೆರೋಲ್ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರಾಗೃಹಗಳಲ್ಲಿನ ಸ್ಥಿತಿಗತಿ ಕುರಿತು ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ.